ಚಿಕ್ಕಮಗಳೂರು:
ಪೊಲೀಸ್ ರಕ್ಷಣೆಯೊಂದಿಗೆ ವೈ ಜಂಕ್ಷನ್ ಕಾಮಗಾರಿ ಕೈಗೊಳ್ಳಿ : ನಾರಾಯಣ ಸ್ವಾಮಿ
ಬರಪೀಡಿತ ಪ್ರದೇಶಗಳಿಗೆ ಜೀವನಾಡಿಯಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಬಳಿಯ ವೈ-ಜಂಕ್ಷನ್ ಬಳಿ ಆ ಭಾಗದ ರೈತರ ಗೊಂದಲದ ಕಾರಣದಿಂದಾಗಿ ಕಾಮಗಾರಿ ನಡೆಸಲು ಆಗದಿರುವುದರಿಂದ ಯೋಜನೆ ಪ್ರಗತಿ ಕುಂಠಿತಗೊಂಡಿದೆ.ಹೀಗಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ರಕ್ಷಣೆ ನೀಡಿ, ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಂಸದರು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
103 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ :
ಚಿಕ್ಕಮಗಳೂರು ನಗರದ ವಾರ್ಡ್ ನಂಬರ್ 8ರ ಜಯನಗರದಲ್ಲಿ ಸುಮಾರು 103 ಕೋಟಿಯ ವಿವಿಧ ಕಾಮಗಾರಿಗಳಿಗೆ ಶಾಸಕರು ಹಾಗೂ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರ ಜೊತೆಗೂಡಿ ನಗರಸಭಾ ಅಧ್ಯಕ್ಷರಾದ ಶ್ರೀಯುತ ವರಸಿದ್ಧಿ ವೇಣುಗೋಪಾಲ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮಾತನಾಡಿದ ನಗರಸಭಾಧ್ಯಕ್ಷರು ಜಯನಗರ ವಾರ್ಡ್ ಗೆ ನಗರಸಭೆಯ ವತಿಯಿಂದ ಸುಮಾರು 103 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದ್ದು, ಇಂದು ಅವುಗಳ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ ಸದ್ಯದಲ್ಲಿಯೇ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ನಗರವು ಸುಂದರವಾಗಿ ಮಾರ್ಪಾಡಾಗುತ್ತದೆ ಎಂದರು. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆನೆದಾಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ:
ಮೂಡಿಗೆರೆ: ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯಿಂದ ರೋಸಿ ಹೋಗಿರುವ ಕೃಷಿಕರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ತೀರ್ಮಾನಿಸಿದ ಸಂತ್ರಸ್ತರು, ಮೂಡಿಗೆರೆ ಭಾಗದಲ್ಲಿ ಆನೆ ದಾಳಿ ಮಿತಿ ಮೀರಿದ್ದು, ಈಗಾಗಲೇ ಅನೇಕರು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ, ಅಪಾರ ಪ್ರಮಾಣದ ಬೆಳೆಹಾನಿ ಕೂಡ ಈ ಭಾಗದಲ್ಲಿ ಸಂಭವಿಸಿದ್ದು ಜನರ ಬದುಕು ತೀವ್ರ ಆತಂಕಕ್ಕೆ ಸಿಲುಕಿದೆ ಎಂಬುದಾಗಿ ತಿಳಿಸಿದರು. ಮೂಡಿಗೆರೆ ತಾಲೂಕಿನ ತ್ರಿಪುರ, ಊರುಬಗೆ, ಬೆಟ್ಟಗೆರೆ, ಪಲ್ಗುಣಿ, ಬಿ.ಹೊಸಳ್ಳಿ, ಬಾಳೂರು, ಹಳೇ ಮೂಡಿಗೆರೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಒಂದೆಡೆ ಕಾಡಾನೆ ದಾಳಿಯಿಂದ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದರೆ ಅನೇಕರು ಆನೆದಾಳಿಯಿಂದಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಕಳೆದು ಕೊಂಡಿದ್ದಾರೆ ಆದರೆ ಈ ಕುರಿತು ಯಾವುದೇ ಅಧಿಕಾರಿಗಳು ಧ್ವನಿಎತ್ತದೇ ಇರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಜನರು ಸಮಸ್ಯೆಯ ಕುರಿತು ವ್ಯಕ್ತಪಡಿಸಿದರು.
ನಾಳೆ ಮಳೆಹಾನಿ ಪ್ರದೇಶಗಳಿಗೆ ಕೇಂದ್ರದ ಅಧಿಕಾರಿಗಳ ಭೇಟಿ:
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದ ಬೆಳೆನಷ್ಟ ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಇಲಾಖೆ ಜಂಟಿಕಾರ್ಯದರ್ಶಿ ಆಶಿಶ್ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ಅವರು ಇನ್ನೆರಡು ತಂಡಗಳಲ್ಲಿ ಇರಲಿದ್ದಾರೆ. ಆಶಿಶ್ ಕುಮಾರ್ ನೇತೃತ್ವದ ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಹಾಗೂ ಅಶೋಕ್ ಕುಮಾರ್ ತಂಡ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಮತ್ತು ಕೆ.ಮನೋಹರನ್ ಅವರ ತಂಡ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿವೆ ಎಂಬುದರ ಕುರಿತಾಗಿ ತಿಳಿಸಿದರು.
ಶಿವಮೊಗ್ಗ:
ಮನೆ ಗೋಡೆ ಬಿದ್ದು ಮಹಿಳೆ ಸಾವು:
ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿಯ ಇಂದಿರಾ ಕಾಲೋನಿಯಲ್ಲಿ ನಡೆದಿದೆ. ಇಂದಿರಾ ಕಾಲೋನಿ ನಿವಾಸಿ ಗೌರಮ್ಮ ಮೃತ ದುರ್ದೈವಿ. ನಿರಂತರ ಮಳೆಯಿಂದಾಗಿ ಗೌರಮ್ಮ ಅವರ ಮನೆ ಗೋಡೆಗಳು ತೇವಗೊಂಡಿದ್ದು, ನಿನ್ನೆ ತಡರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಗೌರಮ್ಮ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಗೌರಮ್ಮ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಹಾಗೂ ಪಾಲಿಕೆ ಸದಸ್ಯ ಆರ್.ಸಿ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಂದೂ ಮಹಾ ಗಣಪನ ಮೆರವಣಿಗೆಯ ಮಾರ್ಗದಲ್ಲಿ ಬದಲಾವಣೆ :
ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಆದೇಶಿಸಿದ್ದಾರೆ.ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್‍ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಎಸ್‍ಎನ್ ಸರ್ಕಲ್, ಬಿ.ಹೆಚ್.ರಸ್ತೆ, ಎ.ಎ.ಸರ್ಕಲ್, ನೆಹರು ರಸ್ತೆ ಮುಖಾಂತರ, ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆ, ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ, ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯರಸ್ತೆ, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆ, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದಿಂದ ತುಂಗಾ ನದಿಯಲ್ಲಿ ವಿಸರ್ಜನೆ ಮಾಡುವಂತೆ ಮಾರ್ಗವನ್ನು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಳಗೋಡು ಗ್ರಾಮದ ನಿವಾಸಿ ಮಧುಕರ ಕೆ.ಬಿ(31) ಮೃತ ದುರ್ದೈವಿ. ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ವ್ಯವಹಾರಕ್ಕಾಗಿ ಮಾಡಿದ ಸಾಲ ತೀರಿಸಲಾಗದೇ ಹಾಗೂ ಅನಾರೋಗ್ಯ ಬಾಧಿಸುತ್ತಿದ್ದ ಹಿನ್ನೆಲೆ ಯುವಕ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಾಲಾಗಿದೆ. ಚಾಲಕ ವೃತ್ತಿಯನ್ನು ನಡೆಸುತ್ತಿದ್ದ ಮಧುಕರ ಸೈಬರ್ ಸೆಂಟರ್ ಸಹ ನಡೆಸುತ್ತಿದ್ದರು. ಇದಕ್ಕಾಗಿ ಇವರು ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದ್ದು ಸಾಲಬಾಧೆ ತಾಳಲಾರದೇ ಇಲಿಪಾಷಾಣ ಸೇವಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧುಕರ ಕೊನೆಯುಸಿರೆಳೆದಿದ್ದಾರೆ.
ಹಾಸನ:
ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ
ಮಹಿಳೆಯನ್ನು ಬರ್ಬರವಾಗಿ ಆಕೆಯ ಪತಿಯೇ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.ಇಂದ್ರಮ್ಮ (48) ಕೊಲೆಯಾದ ಮಹಿಳೆ. ಆರೋಪಿ ಪತಿ ಚಂದ್ರಯ್ಯ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇಂದು ಬೆಳಗ್ಗೆ ಇಂದ್ರಮ್ಮ ನಾಲ್ವರು ಕಾರ್ಮಿಕರ ಜೊತೆ ಕೇಶವಮೂರ್ತಿ ಅವರ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ ಪರಾರಿಯಾಗಿದ್ದಾನೆ. ಈ ವೇಳೆ ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬರು ಕಾಪಾಡಲು ಮುಂದಾದಾಗ ಆ ಮಹಿಳೆಯ ಮೇಲೂ ಚಂದ್ರಯ್ಯ ಹಲ್ಲೆ ಮಾಡಿದ್ದಾನೆ. ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯೂ ಕೂಡಾ ಇಂದ್ರಮ್ಮನನ್ನು ನೇಣು ಹಾಕಿ ಕೊಲ್ಲಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಭಾರೀ ಮಳೆಯ ಮುನ್ಸೂಚನೆ :
ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನರು ತತ್ತರಿಸಿದ್ದರೂ ಸದ್ಯಕ್ಕೆ ಬಿಡುವು ಸಿಗುವ ಸೂಚನೆ ಇಲ್ಲ. ಏಕೆಂದರೆ ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಮನ್ಸೂನ್ ಚುರುಕು ಆಗಿರುವುದು ಮತ್ತು ಕನ್ಯಾಕುಮಾರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೈಲ್ಮೈ ಸುಳಿಗಾಳಿಯಿಂದ ಮಳೆಯಾಗುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬಳ್ಳಾರಿಯಲ್ಲಿ ಮಳೆಯಾಗಲಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗಲಿದೆ. ಬೀದರ್, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬಾಗಲಕೋಟೆ, ರಾಯಚೂರು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಮಳೆಯಾಗಲಿದೆ.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನದ ಮಕ್ಕಳಿಗೆ ಪ್ರಶಸ್ತಿ :
ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಹಾಸನ-ಕೊಡಗು ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸಿ.ಸಿ.ಕುಮಾರ್ ಮತ್ತು ಶಿಕ್ಷಕರು ಶುಭಕೋರಿದ್ದಾರೆ ಇನ್ನೂ ಹೆಚ್ಚಿನ ಸಾಧನೆಗಳನ್ನು ವಿದ್ಯಾರ್ಥಿಗಳು ಮಾಡುವಂತೆ ಅಧ್ಯಾಪಕರು ಹಾರೈಸಿದ್ದಾರೆ.
20 ಶಾಲಾ ಕಟ್ಟಡ ನಿರ್ಮಾಣಕ್ಕೆ 2.70 ಕೋಟಿ ಬಿಡುಗಡೆ:
ಚನ್ನರಾಯಪಟ್ಟಣತಾಲೂಕಿನಲ್ಲಿ ಇಪ್ಪತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 2 ಕೋಟಿ 70 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ತಾಲ್ಲೂಕಿನ ಬಾಗೂರು ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಹಾಗೂ ಕಾಂಪೌಂಡ್ ಉದ್ಘಾಟಿಸಿ ಅವರು ಮಾತನಾಡಿದರು. ಚನ್ನೇನಹಳ್ಳಿಯಲ್ಲಿ ಇನ್ನೊಂದು ಶಾಲಾ ಕಟ್ಟಡ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿದೆ. ಶಾಲೆಗಳ ಅಭಿವೃದ್ಧಿಗೆ ಪೋಷಕರು ಹಾಗೂ ಮುಖಂಡರು ಸಹಕರಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಜೆ.ಕುಮಾರ್, ಶಿಕ್ಷಣಾಧಿಕಾರಿ ಎನ್.ಜೆ ಸೋಮನಾಥ್, ಮುಖ್ಯ ಶಿಕ್ಷಕ ಎಚ್.ಪಿ.ಕುಮಾರಸ್ವಾಮಿ, ರಾಮಚಂದ್ರು, ಸತೀಶ್, ನಟೇಶ್, ಸಿ.ಎಂ.ಚಿಕ್ಕೇಗೌಡ, ಸಿದ್ದೇಗೌಡ, ಹೆಚ್.ಡಿ. ದಿನೇಶ್, ಪಿಡಿಒ ಸಂತೋಷ್ ಮೊದಲಾದವರಿದ್ದರು.
ಕೊಡಗು:
ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ ಇಬ್ಬರ ಬಂಧನ :
ಅಕ್ರಮವಾಗಿ ನಕ್ಷತ್ರ ಆಮೆಯನ್ನು ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮ ವ್ಯಾಪ್ತಿಯ ಕೂಡಿಗೆ ಕುಶಾಲನಗರ ಮುಖ್ಯ ರಸ್ತೆಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಮುಂಭಾಗ ನಕ್ಷತ್ರ ಆಮೆಯನ್ನು ಜಿ.ಡಿ ಗಿರೀಶ್ ಹಾಗೂ ಹಾಸನ ಮೂಲದ ಹೆಚ್.ಎಂ ಅಭಿಷೇಕ್ ಎಂಬಾತ ಸಾಗಾಟ ನಡೆಸುತ್ತಿದ್ದರು. ಈ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ನಕ್ಷತ್ರ ಆಮೆ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರ್ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


0 Comments