ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ, ಹಾಗೂ ಶಾಸಕರಾದ ಎಂ.ಬಿ ಪಾಟೀಲ್ ಇಂದು ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಭೇಟಿ ನೀಡಿದರು.
ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಮೂಲದ ಐಟಿ ಉದ್ಯೋಗಿ
ಮಲೆನಾಡಿನ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಭೇಟಿ ನೀಡಿದ ಅವರು ದೇವಿ ಶಾರದಾಮಾತೆ ಹಾಗೂ ಶ್ರೀ ಮಠದ ಉಭಯ ಜಗದ್ಗುರುಗಳ ದರ್ಶನ ಹಾಗೂ ಆಶೀರ್ವಾದವನ್ನು ಪಡೆದರು. ನಂತರದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಕಡೆಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಜನರ ಭಾವನೆಯನ್ನು ಕೆಣಕುವ ರೀತಿಯ ಕೆಲಸಗಳನ್ನು ಮಾಡುತ್ತಿದೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಇದರಿಂದಾಗಿ ಜನ ಸಾಮಾನ್ಯರಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಆತೀವೃಷ್ಟಿ ಸಂಬಂಧಿತ ಪರಿಹಾರವನ್ನು ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತಿಹಾಸವನ್ನು ತಿರುಚುವ ಕೆಲಸ ಈ ಸರ್ಕಾರದಿಂದ ಆಗುತ್ತಿದೆಯೇ ಹೊರತು ಬೇರಾವುದೇ ಜನೋಪಯೋಗಿ ಕೆಲಸಗಳು ಯೋಜನೆಗಳು ಜಾರಿಗೆ ಬಂದಿಲ್ಲ ಎಂದರು.
ಸರ್ಕಾರದ ಸಾಧನೆ ಶೂನ್ಯ :
ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ದ ಚಾಟಿ ಬೀಸಿದ ಅವರು ಜನ ಸಾಮಾನ್ಯರಿಗೆ ಉಪಯುಕ್ತವಾದ ಯಾವುದೇ ಕಾರ್ಯಗಳು ಈ ಸರ್ಕಾರದಿಂದ ಆಗಿಲ್ಲ, ಕೇವಲ ಭಾವನೆಗಳನ್ನು ಕೆರಳಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ, ಈ ನಿಟ್ಟಿನಲ್ಲಿ ಸರ್ಕಾರದ ಸಾಧನೆ ಶೂನ್ಯ ಎಂದರು. ಅಂತೆಯೇ ಅತಿವೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರ ವೇಗದ ಗತಿಯಲ್ಲಿ ಪರಿಹಾರ ದೊರಕುವಂತೆ ಮಾಡುವ ಕೆಲಸವನ್ನು ಮಾಡಬೇಕು ಈ ಮೂಲಕ ನೊಂದವರಿಗೆ ನೆರವಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ, ಡಾ.ಅಂಶುಮಂತ್, ಕೆಪಿಸಿಸಿ ಸದಸ್ಯರಾದ ದಿನೇಶ, ಮಾಜಿ MLC ಗಾಯತ್ರಿ ಶಾಂತೇಗೌಡ, ದೊರನಾಳು ಪರಮೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.






0 Comments