ಹಾಸನ: (ನ್ಯೂಸ್ ಮಲ್ನಾಡ್ ವರದಿ) ವ್ಯಾಪಾರ ನಡೆಸುವವರ ರೂಪದಲ್ಲಿ ಹಾಸನದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಕಾಳಸಂತೆಯ ದಂಧೆ ಕೋರರನ್ನು ಸೆರೆ ಹಿಡಿದಿದ್ದಾರೆ. 

ಪಡಿತರದಲ್ಲಿ ದೊರಕುವ ರಾಗಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಕುರಿತಾಗಿ ಮಾಹಿತಿಯನ್ನು ಆಧರಿಸಿದ ಎಎಪಿ ಪದಾಧಿಕಾರಿಗಳು, ತಾವೇ ವ್ಯಾಪಾರಸ್ಥರಂತೆ ಮಾರುವೇಷದಲ್ಲಿ ಹೋಗಿ ರಾಗಿ ಖರೀದಿ ಮಾಡಿದ್ದಾರೆ. ಈ ಮೂಲಕ ನಡೆಯುತ್ತಿದ್ದ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. 

ಇದನ್ನೂ ಓದಿ: ಐಸಿಸ್ ನಂಟು ಹೊಂದಿದ್ದ ಆರೋಪದ ಮೇರೆಗೆ ಇಬ್ಬರು ಶಂಕಿತ ಉಗ್ರರು ಖಾಕಿ ವಶಕ್ಕೆ |ತೀರ್ಥಹಳ್ಳಿ ಮೂಲದ ಇನ್ನೋರ್ವ ಶಂಕಿತನಿಗಾಗಿ ತಲಾಶ್

ಕೋಲಾರದ ಬಂಗಾರಪೇಟೆಯ ಎಪಿಎಂಸಿ ವರ್ತಕರನ್ನು ಸಂಪರ್ಕಿಸಿ, 100 ಟನ್ ರಾಗಿ ಬೇಕೆಂದು ಕೇಳಿದ್ದಾರೆ. ಪಡಿತರ ರಾಗಿ, ಪಡಿತರ ಚೀಲದಲ್ಲೇ ಬರುತ್ತದೆಂದು ಆಶ್ವಾಸನೆ ನೀಡಿದ್ದರಂತೆ ಅಲ್ಲಿನ ವರ್ತಕ. 

ಈ ಕುರಿತಾದ ಯಾವುದೇ ದಾಖಲೆ ಪತ್ರ ಇರುವುದಿಲ್ಲ, ಆದರೆ ತೂಕದ ಪ್ರಮಾಣ ಪತ್ರ ಮಾತ್ರ ಸಿಗಲಿದೆ ಎಂದು ವರ್ತಕ ತಿಳಿಸಿದ್ದ ಎನ್ನಲಾಗಿದ್ದು. ನಂತರ ಬಂಗಾರಪೇಟೆ ಎಪಿಎಂಸಿಯಿಂದ ಲೋಡ್ ಆಗಿ, 12 ಚಕ್ರದ ಲಾರಿಯಲ್ಲಿ ಮುಂಜಾನೆ 300 ಕ್ವಿಂಟಾಲ್ ಪಡಿತರ ರಾಗಿ ಹಾಸನಕ್ಕೆ ಬಂದಿದೆ. ಎಎಪಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಲಾರಿ ತಡೆದ ಕಾರ್ಯಕರ್ತರು, ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. 


ಬಡವರಿಗೆ ನೀಡಬೇಕಿದ್ದ ರಾಗಿ ಹೀಗೆ ಅನಧಿಕೃತವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಆಗುತ್ತಿರುವುದು ಬಹಿರಂಗವಾಗಿದೆ. ವಾರದ ಹಿಂದೆ ಹಾಸನ ಜಿಲ್ಲೆ, ಬೇಲೂರಿನಲ್ಲೂ ನೂರಾರು ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆಯಾಗಿತ್ತು. ಈಗ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಘಟನೆ ಬಗ್ಗೆ ಸಮಗ್ರ ತನಿಖೆಗೆ ಆಪ್ ನಾಯಕರು ಆಗ್ರಹಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸೂಕ್ತವಾದ ತನಿಖೆ ನಡೆಸಿ ಇಂತಹ ಘಟನೆಗಳು ಮರುಕಳಿಸದಂತೆ ಕಾಳದಂಧೆಗೆ ಬ್ರೇಕ್ ಹಾಕಬೇಕಿದೆ. 

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಮರ್ಪಕ ರೀತಿಯಲ್ಲಿ ಪಡಿತರ ಪೂರೈಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.