ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಅಧ್ಯಯನ ಮಾಡಲು ಹಾಗೂ ಅದರ ಮಹತ್ವವನ್ನು ಅರಿತು ಕಲಿಯುವ ಸಲುವಾಗಿ ವಿದೇಶಿಗರು ಭಾರತದ ನೆಲಕ್ಕೆ ಕಾಲಿಟ್ಟಿದ್ದಾರೆ ಅದರಲ್ಲೂ ಭಾರತದ ಆಚಾರ, ವಿಚಾರ ಸಂಸ್ಕೃತಿ ಶೈಲಿಯನ್ನು ತಿಳಿದುಕೊಳ್ಳುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಅಧ್ಯಯನ ನಡೆಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ 12 ಜನರ ಬಂಧನ
ದೂರದ ದೇಶವಾದ ಇಸ್ರೇಲ್ ನಿಂದ ಭಾರತಕ್ಕೆ ಬಂದು ಸಂಸ್ಕೃತದ ಅಧ್ಯಯನ ಆರಂಭಿಸಿರುವ ಆರು ಜನ ವಿದ್ಯಾರ್ಥಿಗಳು, ಭಾರತೀಯರು ನಾಚುವಂತೆ ಇಲ್ಲಿನ ಪರಂಪರೆ ಹಾಗೂ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಕಲಿಯುತ್ತಿದ್ದಾರೆ. ಭಾರತೀಯರೇ ವಿದೇಶಿ, ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿರುವ ಈ ಸಂದರ್ಭದಲ್ಲಿ, ವಿದೇಶಿಗರು ಇಲ್ಲಿನ ಪರಂಪರೆ ಹಾಗೂ ದೇವತೆಗಳ ಭಾಷೆ ಎನ್ನಲಾದ ಸಂಸ್ಕೃತ ಅಧ್ಯಯನವನ್ನು ಮಾಡುತ್ತಿರುವುದು ಭಾರತದ ಪ್ರಾಚೀನತೆಯನ್ನು, ಪರಂಪರೆಯನ್ನು ಬಹು ದೊಡ್ಡದಾಗಿ ಬಿಂಬಿಸುತ್ತದೆ.
ಪ್ರಸ್ತುತ ಸಂಸ್ಕೃತ ಅಧ್ಯಯನಕ್ಕೆಂದು ಬಂದವರು ಮೂಲತಃ ಇಸ್ರೇಲ್ ದೇಶದವರು. ಇಸ್ರೇಲ್ ನಲ್ಲಿ ಸಂಸ್ಕೃತದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ತಮ್ಮ 6 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. 6 ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ.ಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸೋಕೆ ವಿದ್ಯಾರ್ಥಿಗಳಾದ ಇನ್ಬಾಲ್,ಆದಿ, ಗಾಲಿ, ಅವ್ಯಾದ್,ಎಲಾ, ಓಲ್ಗಾ ಎಂಬುವವರನ್ನು ಕರೆತಂದಿದ್ದಾರೆ. ಇವೆರೆಲ್ಲರೂ ಭಾರತೀಯ ಸಂಸ್ಕೃತಕ್ಕೆ ಮನಸೋತು ಆಸಕ್ತಿಯಿಂದ ಪ್ರಾಚೀನ ಭಾಷೆಯಾದ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಂಸ್ಕೃತ ಭಾಷೆಯನ್ನು ಕಲಿಯಲು ಮುಂದಾಗಿದ್ದಾರೆ.
ಇಸ್ರೇಲ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಇವರು ರಜೆ ಸಮಯದ 12 ದಿನಗಳ ಕಾಲ ಸಂಸ್ಕೃತ ಕಲಿಯುವ ಸಲುವಾಗಿ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ ಎನ್ನಲಾಗಿದ್ದು, ಈ ಟೀಮ್ ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿ ಕಾಳಿದಾಸನ ರಘುವಂಶದ ಕಾವ್ಯದ ಜೊತೆಗೆ ಶ್ಲೋಕಗಳನ್ನು ಕಲಿಯುತ್ತಿದ್ದಾರೆ. ಇವರ ಮಾತು-ಕಥೆ, ನಯ-ವಿನಯ ಮಾತ್ರ ಭಾರತೀಯರು ನಾಚುವಂತಿದೆ. ಸಂಸ್ಕೃತದ ಮೇಲಷ್ಟೆ ಅಲ್ಲದೆ ಭರತ ಭೂಮಿಯ ಮೇಲೂ ಅಷ್ಟೇ ಗೌರವವಿದೆ.
ಭಾಷೆ ಗೊತ್ತಿಲ್ಲ, ಇಲ್ಯಾರು ಸ್ನೇಹಿತರು-ಸಂಬಂಧಿಗಳಿಲ್ಲ, ಇಲ್ಲಿನ ಊಟ-ತಿಂಡಿಯ ಅರಿವಿಲ್ಲ, ಆದರೂ ಸಹ ಹಿರೇಮಗಳೂರಿನಲ್ಲಿ ಉಳಿದುಕೊಂಡು ಹಗಲಿರುಳು ಸಂಸ್ಕೃತ ಕಲಿಯುತ್ತಿರೋ ಈ ವಿದ್ಯಾರ್ಥಿಗಳ ಭಾರತೀಯ ಪ್ರೀತಿಗೆ ಸ್ಥಳೀಯರು ಕೂಡ ಉತ್ತಮವಾದ ಅಭಿಪ್ರಾಯವನ್ನು ನೀಡಿದ್ದಾರೆ. ನಾವು ಜಗತ್ತಿನ ಯಾವುದೇ ದೇಶಕ್ಕೆ ಹೋದ್ರು ಒಂದೆರಡು ರೀತಿಯ ರೂಢಿ-ಸಂಪ್ರದಾಯವನ್ನ ನೋಡಬಹುದು. ಆದರೆ ಭಾರತದಲ್ಲಿ ಮಾತ್ರ ನೂರಾರು ಕಲೆ, ಸಂಸ್ಕೃತಿಯನ್ನ ವೃದ್ಧಿಸಿಕೊಳ್ಳಲು ಸಾಧ್ಯವೆಂದು ಭಾರತಕ್ಕೆ ಬಂದಿದ್ದೇವೆ ಎನ್ನುತ್ತಾರೆ ವಿದೇಶಿ ಪ್ರಜೆಗಳು.
ಗುರುಗಳಿಂದ ಮೆಚ್ಚುಗೆ:
ಪ್ರಸ್ತುತ ಸಂಸ್ಕೃತ ಭಾಷೆಯನ್ನು ಅದರ ಬಳಕೆಯ ಕುರಿತಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಆರಂಭದಲ್ಲಿ ಸಂಸ್ಕೃತದ ಜೊತೆ ಆಂಗ್ಲ ಭಾಷೆಯನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು ಈಗ ಸಂಪೂರ್ಣವಾಗಿ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ. ನಮ್ಮ ದೇಶದ ಕುರಿತಾಗಿ ವಿದ್ಯಾರ್ಥಿಗಳಲ್ಲಿರುವ ಹೆಮ್ಮೆ, ಕಲಿಕೆಯ ಕುರಿತಾಗಿನ ಆಸಕ್ತಿ ಪ್ರಶಂಸನೀಯ ಎಂದು ಶಿಕ್ಷಕ ವೈಷ್ಣವ್ ವಿದ್ಯಾರ್ಥಿಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಭಾರತದ ಗರಿಮೆಯನ್ನು, ಭಾರತದ ಇತಿಹಾಸ, ಪರಂಪರೆಯನ್ನು ಅರಿಯುವ ಸಲುವಾಗಿ, ಈ ಮಣ್ಣಿನ ಸಂಸ್ಕೃತಿಯನ್ನು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ಬೇರೆ ಬೇರೆ ದೇಶಗಳ ಪ್ರಜೆಗಳು ಭಾರತದ ಮಹೋನ್ನತೆಯನ್ನು ಅರಿತು ಆಗಮಿಸುತ್ತಿದ್ದು, ಭಾರತೀಯರು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅಳವಡಿಕೆಯನ್ನು ಬಿಟ್ಟು ಜೀವನ ನಡೆಸಿದ್ದೇ ಆದಲ್ಲಿ ವಿಶ್ವಕ್ಕೇ ಭಾರತ ಮಾದರಿಯಾಗಿರುತ್ತದೆ.

%20-%20Copy.jpeg)



0 Comments