ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜನರ ಸಮಸ್ಯೆಗಳಿಗೆ ಪರಿಹಾರ, ಅಹವಾಲುಗಳ ಸ್ವೀಕಾರ, ಸಭೆಗಳಲ್ಲಿ ಭಾಗಿ, ಅಭಿವೃದ್ದಿ ಕುರಿತಾದ ಕಾಮಗಾರಿಗಳ ಪರಿಶೀಲನೆ ಸೇರಿದಂತೆ ಒಟ್ಟಾರೆ ಜನರ ಮಧ್ಯೆ ಇರುವ ಜಿಲ್ಲಾಧಿಕಾರಿಗಳು ಒಂದು ದಿನದ ಪ್ರಾಚಾರ್ಯರಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು. ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳಿಗೆ ಒಂದು ದಿನ ಪಾಠ ಮಾಡುವಂತೆ ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಾಲೇಜಿಗೆ ತೆರಳಿ ಎರಡು ಗಂಟೆಗೂ ಅಧಿಕ ಕಾಲ ಪಿಯು ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕುರಿತು ಸುಧೀರ್ಘವಾಗಿ ಪಾಠ ಮಾಡಿದರು.


ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕಗ್ಗಂಟುಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ಬಿಡಿಸಿಟ್ಟ ಜಿಲ್ಲಾಧಿಕಾರಿ ಪೂರಕವಾದ ಉಪಮೆಗಳು, ಕಥೆಗಳನ್ನು ಮನಮುಟ್ಟುವಂತೆ ವಿವರಿಸುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟರು. ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಅಂಶಗಳನ್ನು ಎಳೆಎಳೆಯಾಗಿ ಮನದಟ್ಟು ಮಾಡಿದ ಜಿಲ್ಲಾಧಿಕಾರಿಗಳು ಕೆಲ ಟಿಪ್ಸ್ ಗಳನ್ನೂ ನೀಡಿದರು. 

ತಾವೊಬ್ಬ ಜಿಲ್ಲಾಧಿಕಾರಿ ಎಂಬುದನ್ನು ಬದಿಗಿಟ್ಟು ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಿಶ್ವಾಸ ಮತ್ತು ಸ್ನೇಹದಿಂದ ಮಾತನಾಡಿದ ಅವರು ಕಲಿಕೆಯಲ್ಲಿ ಯಶಸ್ವಿಯಾಗುವಲ್ಲಿನ ಒಳಮರ್ಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡಿದರು. ವಿದ್ಯಾರ್ಥಿಗಳು ಕೂಡ ಜಿಲ್ಲಾಧಿಕಾರಿಗಳ ಬೋಧನೆಯನ್ನು ಆಲಿಸುತ್ತಾ ತಮ್ಮಲ್ಲಿದ್ದ ಪ್ರಶ್ನೆಗಳನ್ನು ಜಿಲ್ಲಾಧಿಕಾರಿಗಳಿಗೆ ಕೇಳಿ ಅವರಿಂದ ಉತ್ತರ ಪಡೆದು ಪರಿಹರಿಸಿಕೊಂಡರು.

ದ್ವಾರಕ ಹಾಗೂ ಬದರೀ ಮಠದ ಉಭಯ ಶ್ರೀಗಳಿಗೆ ದಂಡಕಮಂಡಲ ನೀಡಿ ಅನುಗ್ರಹಿಸಿದ ಶೃಂಗೇರಿ ಜಗದ್ಗುರುಗಳು

ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಿನ್ನೆಯಿಂದ ಶರನ್ನವರಾತ್ರಿಯ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು ಇಂದಿನಿಂದ ವಿದ್ಯಾಧಿದೇವತೆ ಶಾರದೆಯ ಉತ್ಸವ ನಡೆಯಲಿದೆ. ಜಗನ್ಮಾತೆ ಶಾರದಾ ದೇವಿಯು ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಲಿದ್ದು ಭಕ್ತರು ದೇವಿಯ ದರ್ಶನವನ್ನು ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ. 

ನವರಾತ್ರಿಯ ಪ್ರಥಮ ದಿನವಾದ ಇಂದು ಶೃಂಗೇರಿಯ ಶ್ರೀ ಮಠದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು, ವಿಶೇಷವಾಗಿ ದ್ವಾರಕಾ ಪೀಠದ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿಗಳು ಮತ್ತು ಉತ್ತರಾಮ್ನಾಯ ಬದರಿ ಪೀಠದ ಉತ್ತರಾಧಿಕಾರಿಗಳಾದ ಜಗದ್ಗುರು ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾಸ್ವಾಮೀಜಿಗಳಿಗೆ ಇಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ದಂಡ ಕಮಂಡಲ ನೀಡಿ ಅನುಗ್ರಹ ಮಾಡಿದರು. 

ನಿನ್ನೆ ಶೃಂಗೇರಿಗೆ ಆಗಮಿಸಿದ ದ್ವಾರಕಾ ಹಾಗೂ ಬದರಿ ಮಠದ ಉತ್ತರಾಧಿಕಾರಿಗಳನ್ನು ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರಿಶಂಕರ್ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದ್ದರು. ಇಂದು ಜಗದ್ಗುರುಗಳು ದಂಡ ಕಮಂಡಲ ನೀಡುವ ಮೊದಲು ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. 


ಈ ವಿಶೇಷ ಸಂದರ್ಭದಲ್ಲಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರೀಶಂಕರ್, ದಕ್ಷಿಣಾಮೂರ್ತಿಗಳು, ಶಿವಶಂಕರ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.