ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಶಂಕಿತ ಉಗ್ರರನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದು ಬಂಧಿತರನ್ನು ಯಾಸೀನ್ ಮತ್ತು ಮಾಜ್ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿ ಮೂಲದ ಶಾರಿಕ್ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದು, ಕಾರ್ಯಾಚರಣೆಯಲ್ಲಿ ಮುಂದುವರೆದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ನಿವೇಶನಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತ್ ಕಛೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು
ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸೀನ್, ತೀರ್ಥಹಳ್ಳಿಯ ಶಾರಿಕ್ ಮತ್ತು ಮಂಗಳೂರಿನ ಮಾಜ್ ನನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಐಸಿಸ್ ಉಗ್ರರ ಜೊತೆ ಸಂಪರ್ಕ ಇರುವ ಮಾಹಿತಿ ಲಭ್ಯವಾಗಿದೆ.
ಜಬೀವುಲ್ಲಾನ ಮಾಹಿತಿ ಮೇರೆಗೆ ಮೂವರಿಗೆ ಬಲೆ :
ಆಗಸ್ಟ್ 15ರಂದು ನಡೆದ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಅವರನ್ನ ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಿತೇಂದ್ರ ಅವರು ತಮ್ಮ ತನಿಖೆಯ ವೇಳೆ ಜಬೀವುಲ್ಲಾ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಭಯಾನಕ ಮಾಹಿತಿ ಹೊರಬಿದ್ದಿದೆ. ಜಬೀವುಲ್ಲಾ ಮೇಲೆ ಮೂಲಭೂತವಾದಿಗಳು ಪ್ರಭಾವ ಬೀರಿದ್ದರು ಎನ್ನಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಭಾರಿ ಸಂಚು ನಡೆದಿತ್ತು ಎಂಬ ಭಯಾನಕ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಕುರಿತಾಗಿ ಶಿವಮೊಗ್ಗ ಎಸ್ಪಿ ಬಿ.ಎಂ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದು, ಐಸಿಸ್ ನಂಟು ಆರೋಪದಲ್ಲಿ ಇಬ್ಬರ ಬಂಧನವಾಗಿದೆ. ಒಬ್ಬನಿಗಾಗಿ ಶೋಧ ಮುಂದುವರೆದಿದೆ ಎಂಬುದಾಗಿ ತಿಳಿಸಿದ್ದಾರೆ.
ಸೈಯ್ಯದ್ ಯಾಸಿನ್ ಅಲಿಯಾಸ್ ಯಾಸೀನ್ ಅಲಿಯಾಸ್ ಬೈಲು ನನ್ನು ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಕರ್ನಾಟಕದಲ್ಲಿ ಉಗ್ರ ಚಟುವಟಿಕೆ ನಡೆಯಲು ವ್ಯವಸ್ಥಿತ ಪಿತೂರಿ ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆದಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್‌ಗಾಗಿ ತೀವ್ರ ಶೋಧ ಮುಂದುವರಿದಿದೆ. ಯಾಸಿನ್ ಮತ್ತು ಮಂಗಳೂರು ಮೂಲದ ಮಾಜ್ ಮುನಿರ್ ಅಹಮ್ಮದ್ ನನ್ನು ಬಂಧಿಸಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ವ್ಯಾಪಕವಾಗಿ ನಡೆದಿದ್ದ ಕೋಮುಗಲಭೆಗೆ ಕಾರಣವನ್ನು ಪತ್ತೆ ಮಾಡುವ ಅವಧಿಯಲ್ಲಿ ಇಂತಹ ಸ್ಫೋಟಕ ಮಾಹಿತಿಗಳು ಹೊರಬಿದ್ದಿರುವುದು ಎದುರಾಗಬಹುದಾಗಿದ್ದ ದೊಡ್ಡ ಅಪಾಯವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಕಾರಿಯಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಗಳು ದೊರೆಯುವ ನಿರೀಕ್ಷೆಯಿದೆ.





0 Comments