ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಎರಡು ಕಾಡಾನೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. 

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚನ್ನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ. 

ಚಿವನ್ನಹಳ್ಳಿಯ ಚಂದ್ರಾ ನಾಯಕ್ ಎಂಬುವವರು ಕಾಡಂಚಿನ ಮೂರು ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಳೆ ರಕ್ಷಣೆಗೆ ಹೊಲಕ್ಕೆ ಸುತ್ತಲೂ ಬೇಲಿ ಹಾಕಿ ಅದಕ್ಕೆ ಮೇನ್ ಲೈನ್ನಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದಾರೆ.


ಪ್ರತಿ ಮಳೆಗಾಲದಂತೆ ಈ ಬಾರಿಯೂ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಭದ್ರಾ ಅಭಯಾರಣ್ಯದಿಂದ ಏಳು ಆನೆಗಳು ಬಂದಿವೆ. ಅದರಲ್ಲಿ ಎರಡು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ. ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸಾವಿಗೀಡಾದ ಸಲಗಗಳ ವಯಸ್ಸು 14ರಿಂದ 15 ಇದೆ ಎಂದು ತಿಳಿದುಬಂದಿದೆ. ಘಟನಾ ಸಂಬಂಧ ಹೊಲದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಆನೆಗಳ ಉಪಟಳದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ರೈತರು ಸಮಸ್ಯೆಯ ಕುರಿತು ಅಳಲನ್ನು ವ್ಯಕ್ತಪಡಿಸಿದ್ದು, ಪ್ರಕೃತಿಯ ಸಮತೋಲನದಲ್ಲಿ ಮಾನವ ಹಾಗೂ ಪ್ರಾಣಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ.