ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಕೃಷಿಕನೇ ಮನನೊಂದು ಟ್ರ್ಯಾಕ್ಟರ್ ಚಾಲನೆ ಮಾಡಿ ನಾಶ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ರೈತ ಮಂಜುನಾಥ್ ತಮ್ಮ ಕೃಷಿಭೂಮಿಯ ಐದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಇದಕ್ಕಾಗಿ 4 ಲಕ್ಷ ರೂಪಾಯಿ ಹಣವನ್ನು ಸಹ ಖರ್ಚು ಮಾಡಿದ್ದು, ಫಸಲು ಮಾತ್ರ ಬೆಳ್ಳುಳ್ಳಿಯ ಗಾತ್ರದಲ್ಲಿ ಮೂಡಿತ್ತು. ಇದರಿಂದ ಮನನೊಂದ ರೈತ ಈರುಳ್ಳಿಯನ್ನು ಕಿತ್ತರೆ ಕೂಲಿ ಹಣವನ್ನು ಸಹ ಬೆಳೆಯಿಂದ ಕೊಡಲು ಅಸಾಧ್ಯ ಎಂದು ಬೇಸರದಿಂದ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಾಲನೆ ನಡೆಸಿ ಐದು ಎಕರೆ ಈರುಳ್ಳಿ ಬೆಳೆಯನ್ನು ನಾಶ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಅಂಬೇಡ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು; ಸ್ಥಳದಲ್ಲಿ ಜಮಾವಣೆಗೊಂಡ ದಲಿತಪರ ಸಂಘಟನೆಗಳ ಮುಖಂಡರು
ಹಣ ಕೊಡದೇ ಉಚಿತವಾಗಿ ಈರುಳ್ಳಿಯನ್ನು ಕಿತ್ತುಕೊಂಡು ಹೋಗಿ ಎಂದರೂ ಜನರು ಮುಂದೆ ಬಂದು ಈರುಳ್ಳಿಯನ್ನು ಪಡೆದಿಲ್ಲ, ಇನ್ನು ಮಾರಾಟಕ್ಕೆ ಹಾಕಿದರೆ ಯಾರು ಕೊಂಡುಕೊಳ್ಳುತ್ತಾರೆ ಎಂದು ನೋವಿನಿಂದ ರೈತ ಮಂಜುನಾಥ್ ಕಷ್ಟಪಟ್ಟು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ.
ಅತಿಯಾದ ಮಳೆಯು ರೈತನಿಗೆ ಈ ರೀತಿಯ ಸಂಕಷ್ಟ ಹಾಗೂ ನಷ್ಟ ಎದುರಾಗುವಂತೆ ಮಾಡಿದ್ದು, ರೈತ ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ಎದುರಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳು ಈ ಕುರಿತು ಗಮನಹರಿಸಿ ಸಂಕಷ್ಟದಲ್ಲಿರುವ ರೈತನಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.





0 Comments