ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಸಂಪೂರ್ಣವಾಗಿ ಬದಿಗೆ ಸರಿದ ಪರಿಣಾಮ ಮಾಮೂಲಿ ಬಾಗಿಲಿನಿಂದ ಇಳಿಯಲಾಗದೇ ಜನರು ಡ್ರೈವರ್ ಬದಿಯ ಡೋರ್ ನಿಂದ ಇಳಿದಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ: ಚಲಿಸುತ್ತಿದ್ದ ರೈಲನ್ನು ಹತ್ತಲು ಓಡೋಡಿ ಹೋದ ತಂದೆ ಮಗನ ದುರ್ಮರಣ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಬಳಿ ಈ ಘಟನೆ ನಡೆದಿದ್ದು, ನಲವತ್ತಕ್ಕೂ ಅಧಿಕ ಪ್ರಯಾಣಿಕರಿದ್ದ ಗುತ್ತಿಹಳ್ಳಿಯಿಂದ ಬೆಟ್ಟಗೆರೆ ಮೂಲಕ ಮೂಡಿಗೆರೆ ಕಡೆಗೆ ತೆರಳುತ್ತಿದ್ದ KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಇಳಿದಿದೆ.
ಬಸ್ ನ ಎದುರು ವೇಗವಾಗಿ ಬಂದ ಬೈಕ್ ಗೆ ಸೈಡ್ ಕೊಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬೈಕ್ ಸವಾರ ಯಾವುದೇ ಅಪಾಯಕ್ಕೆ ಸಿಲುಕದೆ ಬಚಾವ್ ಆಗಿದ್ದಾನೆ ಎನ್ನಲಾಗಿದೆ.
ಚರಂಡಿಯ ಪಕ್ಕದಲ್ಲಿ ಇಳಿಯಲು ಸೂಕ್ತವಾದ ಸ್ಥಳಇಲ್ಲದೇ ಇದ್ದುದರಿಂದ ಹಾಗೂ ಬಸ್ ಒಂದು ಕಡೆಗೆ ಸಂಪೂರ್ಣವಾಗಿ ಬಾಗಿದ್ದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಗೊಂಡು, ನಂತರದಲ್ಲಿ ಚಾಲಕ ಬಸ್ಸಿನಿಂದ ಇಳಿಯುವ ಬಾಗಿಲಿನ ಮೂಲಕ ಕೆಳಗಿಳಿದಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ವಾಹನಗಳ ಅಪಘಾತ, ನಿಯಂತ್ರಣ ಕಳೆದುಕೊಂಡು ಬೇರೆಡೆಗೆ ವಾಹನಗಳು ಸಂಚರಿಸುವುದು ಸೇರಿದಂತೆ ಈ ರೀತಿಯ ಘಟನೆಗಳು ಸಂಭವಿಸುತ್ತಲೇ ಇದ್ದು, ಹೆಚ್ಚಿನ ತಿರುವು ಮುರುವು ಹಾಗೂ ಘಾಟ್ ಸೆಕ್ಷನ್ ಗಳನ್ನು ಹೊಂದಿರುವ ಪರಿಣಾಮ ಜಾಗರೂಕತೆಯ ಚಾಲನೆ ನಡೆಸುವುದು ಸೂಕ್ತವಾಗಿದೆ.
- ತನು ಕೊಟ್ಟಿಗೆಹಾರ, ವರದಿಗಾರರು





0 Comments