ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ.
ದಕ್ಷಿಣ ಕೊಡಗಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ಯಾಂಟೀನ್ ನಡೆಸುತ್ತಿದ್ದ ಸೂರ್ಯಕಾಂತ್ ಮೊಹಂತಿ ಗಾಂಜಾ ಪ್ರಕರಣದ ಆರೋಪಿ. ಈತ ಹೊಂದಿದ್ದ 6.5ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿರುವ ಪೊಲೀಸರು ಗಾಂಜಾ ಜಾಲದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಒಡಿಶಾ ರಾಜ್ಯದವನಾದ ಸೂರ್ಯಕಾಂತ್ ಮೊಹಂತಿ ಪಟ್ಟಣದಲ್ಲಿ ಗೋಬಿ ಮಂಚೂರಿ (ಫಾಸ್ಟ್ ಫುಡ್) ಮಳಿಗೆಯೊಂದನ್ನು ನಡೆಸುತ್ತಿದ್ದು. ಇದರೊಂದಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ಯಾಂಟೀನ್ ಸಹ ನಡೆಸುತ್ತಿದ್ದ.
ಇದನ್ನೂ ಓದಿ: ಚಿಕ್ಕಮಗಳೂರು: ಬಸ್ ನಿಂದ ಇಳಿಯುವಾಗ ಕೆಳಬಿದ್ದ ಕಾಲೇಜು ವಿದ್ಯಾರ್ಥಿನಿ; ನಿಷ್ಕ್ರಿಯಗೊಂಡ ಮೆದುಳು
ಗಾಂಜಾ ಪೂರೈಕೆ ಕುರಿತು ಖಚಿತ ಮಾಹಿತಿ ಆಧರಿಸಿ ಪೆರುಂಬಾಡಿ ಬಳಿ ಆರೋಪಿಯ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3 ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ. ಈ ನಂತರದಲ್ಲಿ ಆರೋಪಿಯ ಫಾಸ್ಟ್‌ಫುಡ್ ಮಳಿಗೆಯನ್ನು ಪರಿಶೀಲಿಸಿದಾಗ 3.5 ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯಿಂದ ಗಾಂಜಾದೊಂದಿಗೆ ಅದನ್ನು ಪ್ಯಾಕೇಟ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಕವರ್, ಕತ್ತರಿ ಹಾಗೂ ತೂಕ ಮಾಡುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. 1.5 ಲಕ್ಷಮೌಲ್ಯದ 6.5 ಕೆ.ಜಿಯಷ್ಟು ಗಾಂಜಾ, ಒಂದು ಕಾರು, 1,200 ನಗದು, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಒಡಿಶಾದಿಂದ ಗಾಂಜಾವನ್ನು ತಂದು ಕೇರಳದವರಿಗೆ ಹಾಗೂ ತನ್ನ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿಸಲಾಗಿದ್ದು ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
ಈ ಕಾರ್ಯಾಚರಣೆಯು ಸಿಪಿಐ ಶಿವರುದ್ರ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್, ಮುತ್ತಣ್ಣ, ಮಂಜುನಾಥ್, ಸಿಬ್ಬಂದಿಯಾದ ಗಿರೀಶ್, ಮುಸ್ತಾಫ, ಧರ್ಮ, ಸತೀಶ ಹಾಗೂ ಶೆಟ್ಟಪ್ಪ ನೇತೃತ್ವದ ತಂಡ ನಡೆಸಿದೆ.
ಮಾನವ ಸಂಕುಲಕ್ಕೆ ಮಾರಕವಾದ ಇಂತಹ ವಸ್ತುವಿನ ಪೂರೈಕೆಯಲ್ಲಿ ಭಾಗಿಯಾಗಿ ದೇಶದ ಯುವಜನರ ಹಾದಿಯನ್ನು ತಪ್ಪಿಸುವ ಇಂತಹ ನೀಚರ ವಿರುದ್ಧ ಕಠಿಣ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





0 Comments