ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬೆನ್ನುಹುರಿ ಸಮಸ್ಯೆ ಇರುವವರಿಗೆ ಸೂಕ್ತವಾದ ಪರಿಹಾರ ಹಾಗೂ ಅವರನ್ನು ಗುರುತಿಸಿ ಸೂಕ್ತವಾದ ಪ್ರೋತ್ಸಾಹ ನೀಡುವ ಸಲುವಾಗಿ ಕೊಪ್ಪದ ಪುರಭವನದಲ್ಲಿ ಬೆನ್ನುಹುರಿ ಅಪಘಾತ ದಿನಾಚರಣೆ ಕಾರ್ಯಕ್ರಮ ನಡೆಯಿತು. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪಟ್ಟಣದಲ್ಲಿರುವ ಪುರಭವನದಲ್ಲಿ ವಿಶ್ವ ಬೆನ್ನುಹುರಿ ದಿನ ಅಪಘಾತ ದಿನಾಚರಣೆಯ ಅಂಗವಾಗಿ ಶಕಟಪುರ ಶ್ರೀ ಮಠ, ಪ್ರಶಮನೀ ಆಸ್ಪತ್ರೆ ಕೊಪ್ಪ, ಬೆಳ್ತಂಗಡಿಯ ಸೇವಾ ಭಾರತಿ, ರೋಟರಿ ಕ್ಲಬ್ ಕೊಪ್ಪ ಇವರ ಆಶ್ರಯದಲ್ಲಿ ವಿಶ್ವ ಬೆನ್ನುಹುರಿ ದಿನದ ಅಂಗವಾಗಿ ವಿಶಿಷ್ಟವಾದ ಗಾಲಿಕುರ್ಚಿ ಜಾಥಾ ನಡೆಯಿತು.

ಇದನ್ನೂ ಓದಿ: ವೆರಿಕೋಸ್ ವೇನ್ಸ್ ಮುಕ್ತ ಸಮಾಜ ನಿರ್ಮಾಣದ ಸಲುವಾಗಿ ಸುಂಟಿಕೊಪ್ಪದಲ್ಲಿ ಮಾಹಿತಿ ಹಾಗೂ ಅರಿವು ಉಪನ್ಯಾಸ   


ಈ ಕುರಿತಾಗಿ ಮಾತನಾಡಿದ ಪ್ರಶಮನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉದಯಶಂಕರ್ ಬೆನ್ನಿಗೆ ಸಂಬಂಧಿಸಿದಂತೆ ಅಪಘಾತ ಅಥವಾ ಬೇರಾವುದೇ ಸಮಸ್ಯೆಗಳು ಎದುರಾದಾಗ ತಕ್ಷಣವೇ ಚಿಕಿತ್ಸೆ ದೊರೆತರೆ ರೋಗಿಯು ಇಂತಹ ಸಮಸ್ಯೆಗಳಿಂದ ಗುಣ ಮುಖನಾಗುತ್ತಾನೆ. ಬೆನ್ನುಹುರಿ ಸಮಸ್ಯೆ ಹೊಂದಿರುವ ಅನೇಕ ದಿವ್ಯಾಂಗರು 2018 ರಿಂದ ಸೇವಾಧಾಮ ಹೆಸರಿನ ಪುನಶ್ಚೇತನದಲ್ಲಿ ಆರೈಕೆಗೆ ಒಳಪಟ್ಟಿದ್ದಾರೆ ಎಂದರು. 

ಸೇವಾ ಭಾರತಿ ಎಂಬ ಘಟಕವು ಸೇವಾಧಾಮ ಹೆಸರಿನಲ್ಲಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರ ಪೋಷಣೆ ಪಾಲನೆಯನ್ನು 2018 ರಿಂದ ಸಕ್ರಿಯವಾಗಿ ಮಾಡಿಕೊಂಡು ಬಂದಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ಆಘಾತಕ್ಕೊಳಗಾದವರ ಸೇವೆಯನ್ನು ಮಾಡುತ್ತಾ ನಿಂತಿದೆ. 

ವಿಶೇಷ ಚೇತನರಿಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಅವರನ್ನು ಸಬಲರನ್ನಾಗಿಸುವ ಉದ್ದೇಶದಿಂದ ಶಕಟಪುರ ಮಠದ ಶ್ರೀಗಳು ವಿಶೇಷವಾದ ಗಾಲಿ ಕುರ್ಚಿಗಳನ್ನು ನೀಡಿದರು. 

ಸಭಾ ಕಾರ್ಯಕ್ರಮದ ನಂತರ ಕೊಪ್ಪದ ಪುರಭವನದಿಂದ ಬಸ್ ನಿಲ್ದಾಣದವರೆಗೆ ವಿಕಲ ಚೇತನರ ಗಾಲಿಕುರ್ಚಿ ಜಾಥಾ ನಡೆಯಿತು. ಈ ಕಾರ್ಯಕ್ರಮದಲ್ಲಿ ಸೇವಾ ಭಾರತಿಯ ಮುಖ್ಯಸ್ಥ ವಿನಾಯಕ, ರೋಟರಿ ಅಧ್ಯಕ್ಷ ಸುಕೇಶ್, ರೇಖಾ ಉದಯ್ ಶಂಕರ್, ಎಂ.ಆರ್ ರಮೇಶ್, ಕೆ.ಎಸ್ ಸುಬ್ರಮಣ್ಯ ಶೆಟ್ಟಿ, ಗುರುಮೂರ್ತಿ, ನಂದಿನಿ ಇದ್ದರು.