ಹಾಸನ: (ನ್ಯೂಸ್ ಮಲ್ನಾಡ್ ವರದಿ) ಅಡಿಕೆ ಮರ ಕದಿಯಲು ಹೋದ ಮೂವರು ಕಳ್ಳರು ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಹಾಡುಹಗಲೇ ಅಡಕೆ ತೋಟದಲ್ಲಿ ಕಳ್ಳತನ ಮಾಡಲು ಬಂದಿದ್ದ ಮೂವರು ಮೂವರು ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೂಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ; ಎಗ್ಗಿಲ್ಲದೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ವ್ಯಾಘ್ರ ಸೆರೆ
ಇಲ್ಲಿನ ವಿಶ್ವೇಶ್ವರ ಎಂಬುವವರ ತೋಟದಲ್ಲಿ ಕಳೆದ ಎರಡು ವರ್ಷಗಳಿಂದಲೂ ಅಡಕೆ ಮರಗಳ ಕಳ್ಳತನ ನಡೆಯುತ್ತಿತ್ತು. ಈ ಹಿನ್ನೆಲೆ ಎಷ್ಟೇ ಕಾದರೂ ಬೇರೆ ಬೇರೆ ಆಯಾಮಗಳಲ್ಲಿ ಕಳ್ಳರಿಗಾಗಿ ಪತ್ತೆ ಕಾರ್ಯ ನಡೆಸಿದರೂ ಕೂಡ ಸುಳಿವು ದೊರೆತಿರಲಿಲ್ಲ.
ನಂತರದಲ್ಲಿ ಹೇಗಾದರೂ ಮಾಡಿ ಕಳ್ಳರನ್ನು ಪತ್ತೆ ಮಾಡಲೇಬೇಕು ಎಂದು ನಿರ್ಧರಿಸಿದ ಮಾಲೀಕ ತಮ್ಮ ನಾಲ್ಕು ಎಕರೆ ಜಮೀನಿಗೆ ತಂತಿ ಬೇಲಿ ಹಾಕಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿದ್ದರು.
ಕಳ್ಳರು ಎಂದಿನಂತೆ ನಿನ್ನೆ ಗೇಟ್ ಬೀಗ ಮುರಿದು ಅಡಕೆ ತೋಟಕ್ಕೆ ನುಗ್ಗಿ ಮರ ಕತ್ತರಿಸಿ ಹೊತ್ತೊಯ್ಯಲು ಮುಂದಾಗಿದ್ದಾರೆ. ಈ ವೇಳೆ ತೋಟಕ್ಕೆ ಯಾರೋ ಬಂದಿರುವುದರ ಕುರಿತಾಗಿ ವಿಶ್ವೇಶ್ವರ ಮೊಬೈಲ್‌ಗೆ ಮೆಸೇಜ್ ಬಂದಿದೆ. ಕೂಡಲೇ ಎಚ್ಚೆತ್ತ ವಿಶ್ವೇಶ್ವರ ಅವರು ಹಳೇಬೀಡು ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಿ, ಕೂಡಲೇ ತೋಟದ ಬಳಿಗೆ ಮಾಲೀಕರು ಮತ್ತು ಪೊಲೀಸರು ಧಾವಿಸಿದ್ದು, ಮೂವರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗೇಟ್ ಬೀಗ ಮುರಿದು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಳೆದ ವರ್ಷಗಳಲ್ಲಿ ಸಂಭವಿಸಿದ ಕಳ್ಳತನವನ್ನು ಸಹ ಇದೇ ಕಳ್ಳರು ನಡೆಸಿರುವ ಶಂಕೆಯಿದ್ದು ಪೊಲೀಸರ ಸಂಪೂರ್ಣ ತನಿಖೆಯಿಂದ ಈ ಕುರಿತಾದ ಇನ್ನಷ್ಟು ಮಾಹಿತಿಗಳು ಹೊರಬೀಳಲಿದೆ.





0 Comments