ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ಮಂಡಳಿಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಇಂದು ವಿಧಾನಸಭೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿದರು.
ಇಂದು ಸದನದ ಕಲಾಪದ ಶೂನ್ಯವೇಳೆಯಲ್ಲಿ ಈ ಕುರಿತು ಮಾತನಾಡಿದ ಅವರು ಕಾಫಿನಾಡಿನ ರೈತರಿಗೆ ಉಪಯೋಗವಿಲ್ಲದ, ಈಗಾಗಲೇ ಅಸ್ತಿತ್ವದಲ್ಲಿರುವ ಕಾಫಿಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಬೇಕು ಎಂದರು.
ಕಾಫಿ ಅಭಿವೃದ್ಧಿ ಮಂಡಳಿಯಿಂದ 2018 ರಿಂದ ಈ ವರೆಗೆ ಕಾಫಿಬೆಳೆ ಹೊಂದಿರುವ ರೈತರಿಗೆ ಇದುವರೆಗೂ ಯಾವುದೇ ಅತಿವೃಷ್ಟಿ ಪರಿಹಾರ ಬಂದಿಲ್ಲ, ಈ ಭಾರಿ ಮಲೆನಾಡು ಭಾಗದಲ್ಲಿ ಶೇ 33 ರಷ್ಟು ಮಳೆಯಾಗಿದೆ ಕೃಷಿ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವರದಿ ನೀಡಿದೆ. ಆದರೆ ಕಾಫಿ ಅಭಿವೃದ್ಧಿ ಮಂಡಳಿ ಶೇ 22ರಷ್ಟು ಮಳೆಯಾಗಿದೆ ಎಂದು ವರದಿ ನೀಡಿದೆ.
ಆದರೆ ಈ ಬಾರಿ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ ಈ ರೀತಿ ಸುಳ್ಳು ವರದಿ ನೀಡಿ ಜನರ ಹಾದಿ ತಪ್ಪಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಕಾಫಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಉಪಯೋಗವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮನ್ನು ನಿರ್ಲಕ್ಷಿಸಿವೆ ಎಂಬ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಕಾಫಿಯಿಂದ ಈ ಹಿಂದೆ ವಾರ್ಷಿಕವಾಗಿ ವಿದೇಶಿ ವಿನಿಮಯದಿಂದ ಐದು ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತಿತು, ಪ್ರಸ್ತುತ 9 ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತದೆ ಎಂದರು ಹಾಗೂ ಕಾಫಿ ಮಂಡಳಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಕಾಫಿಯನ್ನು ದೊಡ್ಡ ಉದ್ಯಮ, ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿರುವುದು ಸರಿಯಲ್ಲ. ಇದನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸಿದರೆ ರೈತರಿಗೆ ಸರ್ಕಾರದ ಸವಲತ್ತುಗಳು ದೊರೆಯಲಿದೆ. ಕೇಂದ್ರ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.
ಮಲೆನಾಡು ಭಾಗದಲ್ಲಿ ಪ್ರತಿವರ್ಷ ಹೆಚ್ಚು ಪ್ರಮಾಣದ ಮಳೆಯಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯನ್ನು ಅತಿವೃಷ್ಢಿ ಪ್ರದೇಶ ಎಂದು ಘೋಷಿಸಬೇಕು ಎಂದು ಈ ವೇಳೆ ಒತ್ತಾಯಿಸಿದರು.
ಈ ಕುರಿತಾಗಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿದ್ದು ಕಾಫಿ ಮಂಡಳಿಯ ರದ್ದು ಪಡಿಸುವಿಕೆ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.





0 Comments