ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಕುತ್ತಿಗೆ ಒತ್ತಿ ಹತ್ಯೆ ಮಾಡಿದ್ದ ಕಿರಾತಕ ಪತಿಗೆ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ.

13ಏಪ್ರಿಲ್ 2020 ರಂದು ರಾತ್ರಿ ಶಿರಾಳಕೊಪ್ಪ ಪೊಲಿಸ್‌ ಠಾಣಾ ವ್ಯಾಪ್ತಿಯ ಬಿಳಕಿ ಗ್ರಾಮದ ವಾಸಿ ಮಹೇಶ ಕುಮಾರ ಎಂಬ 31 ವರ್ಷ ಪ್ರಾಯದ ಆರೋಪಿಯು ಆತನ ಪತ್ನಿಗೆ ಮದುವೆಯಾಗಿ 6 ವರ್ಷಕಳೆದರೂ ಮಕ್ಕಳಾಗಿಲ್ಲವೆಂದು ಗಲಾಟೆ ತೆಗೆದು, ಆಕೆಯು ಮಲಗಿದ್ದಾಗ ಕುತ್ತಿಗೆಯನ್ನು ಹಿಸುಕಿ, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾನೆಂದು ಈ ಹಿಂದೆ ದೂರು ದಾಖಲಾಗಿತ್ತು.


ದೂರಿನ ಮೇರೆಗೆ ಗುನ್ನೆ ಸಂಖ್ಯೆ 0038/2020 ಕಲಂ 498(ಎ), 504, 506, 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಾಗೂ ಈ ಪ್ರಕರಣದ ಆಗಿನ ತನಿಖಾಧಿಕಾರಿಗಳಾಗಿದ್ದ ಬಸವರಾಜ್‌ ಪಿಎಸ್‌, ಸಿಪಿಐ, ಶಿಕಾರಿಪುರ ವೃತ್ತ ಇವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀ ಶಾಂತರಾಜ್‌, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಮಾನು ಕೆ. ಎಸ್ ರವರು ಇಂದು ಆರೋಪಿ ಮಹೇಶಕುಮಾರ ಶಿರಾಳಕೊಪ್ಪ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 40,000/- ರೂ ದಂಡ, ದಂಡವನ್ನು ವಿಧಿಸಿದೆ. ವಿಧಿಸಿರುವ ದಂಡದ ಮೊತ್ತವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 04 ತಿಂಗಳ ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.