ಶಿವಮೊಗ್ಗ:(ನ್ಯೂಸ್ ಮಲ್ನಾಡ್ ವರದಿ) ಅಡಿಕೆಗೆ ಬರುವ ಎಲೆ ಚುಕ್ಕಿರೋಗ ಮಾರಕವಲ್ಲ. ವೈಜ್ಞಾನಿಕ ಕ್ರಮ ಹಾಗೂ ಅನುಕರಣೆಯಿಂದ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ, ರೈತರು ಎಲೆಚುಕ್ಕಿ ರೋಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಪ್ರಕಾಶ್ ಸಾರ್ವಜನಿಕರಲ್ಲಿ ತಿಳಿಸಿದರು.
ಇದನ್ನೂ ಓದಿ:ಆಟೋದಲ್ಲಿ ಮರೆತಿದ್ದ ಲಕ್ಷಾಂತರ ಮೌಲ್ಯದ ಆಭರಣವನ್ನು ಮಹಿಳೆಗೆ ಹಿಂದಿರುಗಿಸಿದ ಚಾಲಕ
ಈ ಕುರಿತಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಳಲೂರಿನ ಗ್ರಾಮದಲ್ಲಿ ತೀರ್ಥಹಳ್ಳಿ ತೋಟಗಾರಿಕೆ ಇಲಾಖೆ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅಡಕೆ ಬೆಳೆಯ ಎಲೆಚುಕ್ಕಿ ರೋಗದ ಹತೋಟಿ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಅಡಿಕೆ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ ಮಾತನಾಡಿ, ಕೊಲೆಟೊಟ್ಟೆಕಮ್, ಪೆಸ್ಟಲೋಷಿಯಾ ಫಿಲ್ಲೊಸ್ಟಿಕ್ವಾ ಸಂಶೋಧನಾ ಮತ್ತು ಎಂಬ ಎಲೆಚುಕ್ಕೆ ರೋಗ ಶಿಲೀಂಧ್ರಗಳಿಂದ ಅಡಕೆಗೆ ತಗುಲುತ್ತದೆ. ಶೇ.90ರಷ್ಟು ಹತೋಟಿಗೆ ಪ್ರಮಾಣ ಹೆಚ್ಚು ಮಳೆ, ಕಡಿಮೆ ತಾಪಮಾನ ರೋಗ ಉಲ್ಬಣವಾಗಲು ಕಾರಣವಾಗಿದೆ. ಶೇ. 1ರ ಬೋರ್ಡೋ ಅಥವಾ ಸಾಫ್ 2 ಗ್ರಾಂ/ ಲೀ ಅಥವಾ ಹೆಚ್ಚಕೋನೋಜೋಲ್ 1 ಮೀ.ಲೀ. ಸಿಂಪಡಿಸುವುದರಿಂದ ರೋಗವನ್ನು ಹತೋಟಿಗೆ ತರಬಹುದು ಎಂದರು. ಈ ಮೂಲಕ ಕೃಷಿಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು.
ಮಣ್ಣು ಪರೀಕ್ಷೆ, ಬೋರ್ಡೋ ದ್ರಾವಣ ತಯಾರಿ ಹಾಗೂ ಪೋಷಕಾಂಶದ ನಿರ್ವಹಣೆ ಬಗ್ಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿಕುಮಾರ್ ತಿಳಿಸಿದರು. ಗ್ರಾಪಂ ಅಧ್ಯಕ್ಷ ಭಾಸ್ಕರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಶಾಂತಿಲಾಲ್ ಗಾಂಧಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಯು.ಪ್ರೇಮ್ ಚಂದ್, ಲಕ್ಷ್ಮೀಕಾಂತ್ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ವ್ಯಾಪ್ತಿಯ ವಿವಿಧ ತೋಟಗಳಲ್ಲಿ ಸಹ ಎಲೆಚುಕ್ಕಿ ರೋಗ ಈ ಹಿಂದಿನಿಂದಲೂ ಕಾಣಿಸಿಕೊಂಡಿದ್ದು ರೈತರು ಅತೀವ ಆತಂಕಕ್ಕೊಳಾಗಿದ್ದರು.
ಕಾರ್ಯಕ್ರಮದಲ್ಲಿ 60 ರೈತರು ಭಾಗವಹಿಸಿದ್ದರು. ಅಲ್ಲದೇ, ಕ್ಷೇತ್ರವನ್ನು ರೈತರೊಂದಿಗೆ ಭೇಟಿ ಮಾಡಿ ರೋಗ ಪೀಡಿತ ತೋಟದಲ್ಲಿ ಹತೋಟಿ ಕ್ರಮಗಳ ಪೂರಕವಾದ ಮಾಹಿತಿಯನ್ನು ಒದಗಿಸುವ ಕೆಲಸ ಸಹ ನಡೆಯಿತು. ಅಲ್ಲದೇ ಯಾವುದೇ ಸಂದರ್ಭದಲ್ಲಿ ರೈತರು ಗೊಂದಲ ಅಥವಾ ಏನಾದರೂ ಸಮಸ್ಯೆಗಳಿದ್ದಲ್ಲಿ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸೂಚಿಸಿದರು.





0 Comments