ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆದಿದ್ದು ಕಾರ್ಯಕರ್ತರು ಹಲ್ಲೆ ನಡೆಸಿಕೊಂಡು ಗಾಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಇದನ್ನೂ ಓದಿ: ಅಡಿಕೆಗೆ ಬಾಧಿಸಿರುವ ರೋಗಗಳ ನಿಯಂತ್ರಣದ ಕುರಿತು ಕ್ರಮಕೈಗೊಳ್ಳದೇ ಹೋದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು: ಬೇಳೂರು ಗೋಪಾಲಕೃಷ್ಣ

ಘಟನೆಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಶ್ವಂತ್ ದೊಲ್ಪಾಡಿ, ಖಜಾಂಚಿ ಚಂದನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಳೇ ವೈಷಮ್ಯದಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಕೂಡಾ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.


ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಹಸುಗಳ ಸಜೀವ ದಹನ; ಇನ್ನೆರಡು ಹಸುಗಳು ಪಾರು: 

ಚಿಕ್ಕಮಗಳೂರು: ಅನುಮಾನಾಸ್ಪದ ರೀತಿಯಲ್ಲಿ ಹಸುವಿನ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಎರಡು ಹಸುಗಳು ಸಜೀವವಾಗಿ ಸಾವನ್ನಪ್ಪಿರುವ ದುರ್ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಗಡಿರಂಗಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಮೂರ್ತಿ ಎಂಬುವವರಿಗೆ ಸೇರಿದ ಹಸುವಿನ ಕೊಟ್ಟಿಗೆ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.



ಈ ಅವಘಡದ ವೇಳೆ ಒಟ್ಟು ನಾಲ್ಕು ಹಸುಗಳು ಕೊಟ್ಟಿಗೆಯಲ್ಲಿದ್ದು ಎರಡು ಹಸುಗಳು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದರೆ, ಇನ್ನೆರಡು ಹಸುಗಳು ಸಜೀವವಾಗಿ ದಹನಗೊಂಡಿದೆ. ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. 

ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದ್ದು, ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ ಸಹ ವ್ಯಕ್ತವಾಗಿದೆ. ಹಸು ಹಾಗೂ ಕೊಟ್ಟಿಗೆಯನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ವಾರಸುದಾರರು ಘಟನಾ ಸಂಬಂಧ ಬೇಸರ ವ್ಯಕ್ತಪಡಿಸಿದ್ದು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.