ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದಲ್ಲಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ನಗದನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್

ಚಿಕ್ಕಮಗಳೂರು ನಗರದಕೋಟೆಯ ಮೂರುಮನೆ ಹಳ್ಳಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಚಿಕ್ಕಮಗಳೂರು ಪೊಲೀಸರು 7 ಜನ ಆರೋಪಿಗಳು ಮತ್ತು 33,430 ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಒಂಭತ್ತು ಜನ ಆರೋಪಿಗಳು ಜೂಜಾಟದಲ್ಲಿ ತೊಡಗಿದ್ದು ದಾಳಿಯ ವೇಳೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. 


ಬಂಧಿತರನ್ನು ಸಿ.ಎನ್ ಚಂದ್ರಶೇಖರ್, ಸಿ.ಎಂ ವಿನಯ್ ಕುಮಾರ್, ಸಿ.ಎಸ್ ಹರೀಶ, ಅಶ್ವಥ್, ರಾಕೇಶ್, ರಕ್ಷಿತ್, ರಂಜಿತ್ ಕುಮಾರ್, ಕೆ.ಪಿ ನಟರಾಜ್ ಎಂದು ಗುರುತಿಸಲಾಗಿದೆ. 

ಈ ಕಾರ್ಯಾಚರಣೆಯನ್ನು ಚಿಕ್ಕಮಗಳೂರು ನಗರದ ಪಿ.ಎಸ್.ಐ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ನಡೆಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್: 

ಚಿಕ್ಕಮಗಳೂರು: ಜನರ ಸಮಸ್ಯೆಗಳಿಗೆ ಪರಿಹಾರ, ಅಹವಾಲುಗಳ ಸ್ವೀಕಾರ, ಸಭೆಗಳಲ್ಲಿ ಭಾಗಿ, ಅಭಿವೃದ್ದಿ ಕುರಿತಾದ ಕಾಮಗಾರಿಗಳ ಪರಿಶೀಲನೆ ಸೇರಿದಂತೆ ಒಟ್ಟಾರೆ ಜನರ ಮಧ್ಯೆ ಇರುವ ಜಿಲ್ಲಾಧಿಕಾರಿಗಳು ಒಂದು ದಿನದ ಪ್ರಾಚಾರ್ಯರಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ನಗರದ ಮಲೆನಾಡು ವಿದ್ಯಾಸಂಸ್ಥೆಗೆ ತೆರಳಿ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವತಃ ಪಾಠ ಮಾಡುವ ಮೂಲಕ ಶಿಕ್ಷಣ ಪ್ರೀತಿಯನ್ನು ಮೆರೆದರು. ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳಿಗೆ ಒಂದು ದಿನ ಪಾಠ ಮಾಡುವಂತೆ ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಾಲೇಜಿಗೆ ತೆರಳಿ ಎರಡು ಗಂಟೆಗೂ ಅಧಿಕ ಕಾಲ ಪಿಯು ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕುರಿತು ಸುಧೀರ್ಘವಾಗಿ ಪಾಠ ಮಾಡಿದರು.


ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರದ ಕಗ್ಗಂಟುಗಳನ್ನು ವಿದ್ಯಾರ್ಥಿಗಳೆದುರು ಎಳೆಎಳೆಯಾಗಿ ಬಿಡಿಸಿಟ್ಟ ಜಿಲ್ಲಾಧಿಕಾರಿ ಪೂರಕವಾದ ಉಪಮೆಗಳು, ಕಥೆಗಳನ್ನು ಮನಮುಟ್ಟುವಂತೆ ವಿವರಿಸುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟರು. ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಅಂಶಗಳನ್ನು ಎಳೆಎಳೆಯಾಗಿ ಮನದಟ್ಟು ಮಾಡಿದ ಜಿಲ್ಲಾಧಿಕಾರಿಗಳು ಕೆಲ ಟಿಪ್ಸ್ ಗಳನ್ನೂ ನೀಡಿದರು. 

ತಾವೊಬ್ಬ ಜಿಲ್ಲಾಧಿಕಾರಿ ಎಂಬುದನ್ನು ಬದಿಗಿಟ್ಟು ವಿದ್ಯಾರ್ಥಿಗಳೊಂದಿಗೆ ಪ್ರೀತಿ ವಿಶ್ವಾಸ ಮತ್ತು ಸ್ನೇಹದಿಂದ ಮಾತನಾಡಿದ ಅವರು ಕಲಿಕೆಯಲ್ಲಿ ಯಶಸ್ವಿಯಾಗುವಲ್ಲಿನ ಒಳಮರ್ಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡಿದರು. ವಿದ್ಯಾರ್ಥಿಗಳು ಕೂಡ ಜಿಲ್ಲಾಧಿಕಾರಿಗಳ ಬೋಧನೆಯನ್ನು ಆಲಿಸುತ್ತಾ ತಮ್ಮಲ್ಲಿದ್ದ ಪ್ರಶ್ನೆಗಳನ್ನು ಜಿಲ್ಲಾಧಿಕಾರಿಗಳಿಗೆ ಕೇಳಿ ಅವರಿಂದ ಉತ್ತರ ಪಡೆದು ಪರಿಹರಿಸಿಕೊಂಡರು.