ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಿನ್ನೆಯಿಂದ ಶರನ್ನವರಾತ್ರಿಯ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು ಇಂದಿನಿಂದ ವಿದ್ಯಾಧಿದೇವತೆ ಶಾರದೆಯ ಉತ್ಸವ ನಡೆಯಲಿದೆ. ಜಗನ್ಮಾತೆ ಶಾರದಾ ದೇವಿಯು ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಲಿದ್ದು ಭಕ್ತರು ದೇವಿಯ ದರ್ಶನವನ್ನು ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ನವರಾತ್ರಿಯ ಪ್ರಥಮ ದಿನವಾದ ಇಂದು ಶೃಂಗೇರಿಯ ಶ್ರೀ ಮಠದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು, ವಿಶೇಷವಾಗಿ ದ್ವಾರಕಾ ಪೀಠದ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿಗಳು ಮತ್ತು ಉತ್ತರಾಮ್ನಾಯ ಬದರಿ ಪೀಠದ ಉತ್ತರಾಧಿಕಾರಿಗಳಾದ ಜಗದ್ಗುರು ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾಸ್ವಾಮೀಜಿಗಳಿಗೆ ಇಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ದಂಡ ಕಮಂಡಲ ನೀಡಿ ಅನುಗ್ರಹ ಮಾಡಿದರು.
ನಿನ್ನೆ ಶೃಂಗೇರಿಗೆ ಆಗಮಿಸಿದ ದ್ವಾರಕಾ ಹಾಗೂ ಬದರಿ ಮಠದ ಉತ್ತರಾಧಿಕಾರಿಗಳನ್ನು ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರಿಶಂಕರ್ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದ್ದರು. ಇಂದು ಜಗದ್ಗುರುಗಳು ದಂಡ ಕಮಂಡಲ ನೀಡುವ ಮೊದಲು ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಈ ವಿಶೇಷ ಸಂದರ್ಭದಲ್ಲಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರೀಶಂಕರ್, ದಕ್ಷಿಣಾಮೂರ್ತಿಗಳು, ಶಿವಶಂಕರ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮನೆ ಮುಂದಿದ್ದ ತೊಟ್ಟಿಗೆ ಬಿದ್ದು 11 ತಿಂಗಳ ಮಗುವಿನ ದುರ್ಮರಣ:
ಶಿವಮೊಗ್ಗ: ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮಗನಾದ ಅಕ್ಷಯ್ (11 ತಿಂಗಳು ) ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿರುವ ಹಸುಗೂಸು.
ಮುಂದಿನ ವಾರ ಮಗುವಿನ ಪ್ರಥಮ ವರ್ಷದ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬವರ್ಗದವರು ಯೋಚಿಸಿದರು ಆದರೆ ವಿಧಿಯ ಆಟ ಎಂಬಂತೆ ಮಗುವಿನ ಸಾವಿನಿಂದ ಮನೆಯಲ್ಲೀಗ ಸಂಭ್ರಮ ಬದಲಾಗಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಈ ದುರಂತದಿಂದಾಗಿ ಊರಿನಲ್ಲಿ ಸ್ಮಶಾನ ಮೌನ ಆವರಿಸಿದ್ದು ನಿನ್ನೆ ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅಂಬೆಗಾಲು ಇಡುತ್ತಾ ಒಡಾಡುತ್ತಿದ್ದ ಮಗು ತನಗರಿವಿಲ್ಲದಂತೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ.
ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಮಗುವಿನ ಆರೋಗ್ಯದಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಕಳೆಬರಹವನ್ನು ಪೋಷಕರಿಗೆ ನೀಡುವಾಗ ಅಲ್ಲಿ ಸೇರಿದ್ದ ಜನಸ್ತೋಮ ಹಾಗೂ ಕುಟುಂಬಸ್ಥರ ಆಕ್ರಂದನ ನೆರೆದಿದ್ದ ಜನರ ಹೃದಯ ಹಿಂಡುತ್ತಿತ್ತು.
ಮೃತ ಮಗುವಿನ ಮೂರು ವರ್ಷದ ಅಕ್ಕ ನಕ್ಷತ್ರ ಹಾಗೂ ತಂದೆ ತಾಯಿಯ ದುಃಖ ಹೇಳತೀರದಾಗಿತ್ತು.
ನಿನ್ನೆ ಸಂಜೆಯೇ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ವಿಧಿಗೆ ಹಿಡಿಶಾಪ ಹಾಕುತ್ತಾ ಊರಿನ ಗ್ರಾಮಸ್ಥರೂ ಭಾಗಿಯಾಗಿ ಆ ಪುಟ್ಟ ಮಗುವಿನ ಶವ ಸಂಸ್ಕಾರ ನಡೆಸಿದರು. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.









0 Comments