ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರ ಪೌರ ಕಾರ್ಮಿಕರಿಗಾಗಿಯೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಕುರಿತು ಅರಿವು ಮೂಡಿಸುವ ಹಾಗೂ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕುರುವಂಗಿ ವೆಂಕಟೇಶ್‌ ತಿಳಿಸಿದರು. 

ಇದನ್ನೂ ಓದಿ: ಮೂಡಿಗೆರೆ: ಸಾಮಾಜಿಕ ಜಾಲತಾಣ ಬಳಸಿಕೊಂಡು ಯುವತಿಗೆ ವಂಚನೆ; ದೂರು ದಾಖಲು

ರಾಜ್ಯದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ, ಅಭಿವೃದ್ಧಿ ನಿಗಮದಲ್ಲಿ ಪೌರಸೇವಾ ಕುಟುಂಬಗಳಿಗೆ ಸಿಗುವ ಸವಲತ್ತುಗಳ ಕುರಿತು ಕರಪತ್ರಗಳನ್ನು ಮನೆ ಮನೆಗಳಿಗೆ ತೆರಳಿ ವಿತರಿಸುವ ಕಾರ್ಯ ನಡೆದಿದ್ದು ಸರ್ಕಾರದ ಸೌಲಭ್ಯವನ್ನು ಪೌರಸೇವಾ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರು ಪಡೆದುಕೊಳ್ಳುವಂತೆ ಕೋರಿದರು. 


ನಾನೂ ನಿಮ್ಮ ಕುಟುಂಬದ ಸದಸ್ಯ :

ಪೌರಸೇವಾ ನೌಕರರು ಮತ್ತು ಅವರ ಕುಟುಂಬಗಳಿಗೆ ನಿಗಮದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಪೂರ್ಣ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ ವೆಂಕಟೇಶ್‌, ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಮಗದ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ಈ ನಿಗಮದಲ್ಲಿ ಪೌರ ಸೇವಾ ನೌಕರರಿಗೆ ಇರುವ ಎಲ್ಲಾ ಸೌಲಭ್ಯಗಳನ್ನು ಅರ್ಹರು ಪಡೆದುಕೊಂಡು ಫಲಾನುಭವಿಗಳಾಗಬೇಕು ಎಂದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಸೆ.6 ರಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ಧಿ ನಿಗಮದಿಂದ ಪೌರಸೇವಾ ನೌಕರರು ಹಾಗೂ ಅವರ ಅವಲಂಬಿತ ಕುಟುಂಬಗಳಿಗೆ ಸಿಗುವ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸಂಬಂಧಿಸಿದವರು ಈ ಸಭೆಗೆ ಹಾಜರಾಗಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು. 

ನೌಕರರ ಶ್ರೇಯೋಭಿವೃದ್ಧಿಗೆ ಬದ್ಧ :

ಕರ್ನಾಟಕ ರಾಜ್ಯದಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುತ್ತಿರುವ ಪೌರಸೇವಾ ಕಾರ್ಮಿಕರಲ್ಲಿ 6 ಸಾವಿರ ನೌಕರರನ್ನು ಖಾಯಂಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸದ್ಯದಲ್ಲೇ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳ ನೇತೃತ್ವದ ಮುಂದಿನ ಸಭೆಯಲ್ಲಿ ಈ ಸಂಬಂಧ ಶಾಸಕ ಸಿ.ಟಿ.ರವಿ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ನೌಕರರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುವುದಾಗಿ ತಿಳಿಸಿದರು. 

ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಪೌರಸೇವಾ ಕುಟುಂಬಗಳಿಗೆ ಇರುವ ಕಾರ್ಯಕ್ರಮಗಳ ಜಾಗೃತಿ ಕುರಿತು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಮೊದಲ ಹಂತದ ಪ್ರವಾಸ ಮೈಸೂರಿನಿಂದ ಆರಂಭಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡಿದ್ದು, ಸಖರಾಯಪಟ್ಟಣ ಹೋಬಳಿ, ಸಖರಾಯಪಟ್ಟಣ, ಜಾಗರ ಹಾಗೂ ಕಸಬಾ ಹೋಬಳಿಗಳಲ್ಲಿ ಮೊದಲ ಹಂತದ ಪ್ರವಾಸ ಮಾಡಿರುವುದಾಗಿ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಮಾಜಿ ಸದಸ್ಯ ನರಸಿಂಹ, ಚಿಕ್ಕಮಗಳೂರು ವಿಧಾನಸಭಾ ಬಿಜೆಪಿ ಕ್ಷೇತ್ರ ಸಂಘಟಕ ಸೀತಾರಾಂ ಭರಣ್ಯ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ನಗರಾಧ್ಯಕ್ಷ ನರಸಿಂಹಮೂರ್ತಿ ಹಾಜರಿದ್ದರು.