ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ಗೋದಾಮಿನಿಂದ ಕಾಫಿ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ. 

ಇದನ್ನೂ ಓದಿ: VHP ಬಜರಂಗದಳ ಕೊಪ್ಪ ವತಿಯಿಂದ ನಾಳೆ ಜಿಲ್ಲಾ ಮಟ್ಟದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ

ಕೊಡಗಿನ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಚೆನ್ನಯ್ಯನಕೋಟೆ ಎಂಬ ಗ್ರಾಮದ ಪಟ್ಟಡ ಎನ್.ಮಾಚಯ್ಯ ಎಂಬುವವರ ಕಾಫಿ ತೋಟದಲ್ಲಿನ ಗೋದಾಮಿನಿಂದ ಕಾಫಿಯನ್ನು ಕಳ್ಳರು ಕಳ್ಳತನ ಮಾಡಿರುವ ಕುರಿತು ಈ ಹಿಂದೆ ಪ್ರಕರಣ ದಾಖಲಾಗಿತ್ತು.


ಅಂದು ನೀಡಿದ್ದ ದೂರಿನ ಅನುಸಾರ ತನಿಖೆ ಆರಂಭಿಸಿದ ಮಡಿಕೇರಿ ನಗರ ವೃತ್ತ ನಿರೀಕ್ಷಕರು ಹಾಗೂ ಸಿದ್ದಾಪುರ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಯವರನ್ನೊಳಗೊಂಡ ಪೊಲೀಸರ ತಂಡ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ. 

ಚೆನ್ನಯ್ಯನಕೋಟೆ ಗ್ರಾಮದ ಮಣಿ, ಮಂಜು, ಅಯ್ಯಪ್ಪ, ಸುರೇಶ್ ಕುಮಾರ್, ಲಕ್ಷ್ಮಣ ಮತ್ತು ಕಾಳ ಬಂಧಿತ ಆರೋಪಿಗಳು. ಈ ಆರೋಪಿಗಳನ್ನು ದಸ್ತಗಿರಿ ಮಾಡಿ ಕಳ್ಳತನ ಮಾಡಿದ್ದ 2,48,000 ಮೌಲ್ಯದ ಕಾಫಿ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮಿನಿ ವ್ಯಾನ್ ಹಾಗೂ ಒಂದು ಬಜಾಜ್ ಆಟೋರಿಕ್ಷಾ ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ವೃತ್ತ ಸಿಪಿಐ ನಾಗೇಶ್‌, ಸಿದ್ದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್‌ ರಾಜ್‌, ಎಎಸ್ಐ ತಮ್ಮಯ್ಯ, ಸಿಬ್ಬಂದಿಗಳಾದ ರತನ್, ಲಕ್ಷ್ಮೀಕಾಂತ್, ಭರತ್, ಕಿರಣ್ ಕುಮಾರ್, ವಸಂತ್ ಕುಮಾರ್, ಮಲ್ಲಪ್ಪ ಮುಶಿಗೇರಿ ಹಾಗೂ ಮಡಿಕೇರಿ ನಗರ ವೃತ್ತದ ಸಿಬ್ಬಂದಿಗಳಾದ ಕಿರಣ್ ಕುಮಾರ್ ಮತ್ತು ಸುಧೀರ್ ಭಾಗವಹಿಸಿದ್ದರು. ಪೊಲೀಸ್‌ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳ ಈ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.