ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಡಾ. B.R ಅಂಬೇಡ್ಕರ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯ ಬಂಧನ

ಸಾಗರದ ಎಸ್.ಎನ್ ನಗರದ ನಿವಾಸಿ ನಾಗರಾಜ್ ಎಂಬ 23 ವರ್ಷ ಪ್ರಾಯದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಮೃತ ದುರ್ದೈವಿ. ಗ್ಯಾಸ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಾಗರಾಜ್ ನಿನ್ನೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಮೃತ ನಾಗರಾಜ್ ನ ತಾಯಿ ತೀರಿಕೊಂಡು ಒಂದು ವರ್ಷ ಮುಗಿಯುವ ವೇಳೆಗೆ ಮಗನೂ ಬಾರದ ಲೋಕಕ್ಕೆ ತೆರಳಿರುವುದು ಸ್ಥಳೀಯರಲ್ಲಿ, ಕುಟುಂಬವರ್ಗ ಹಾಗೂ ಸ್ನೇಹಿತರಲ್ಲಿ ಅತೀವವಾದ ನೋವನ್ನು ಉಂಟುಮಾಡಿದೆ. 

ಕಳೆದೆರಡು ದಿನಗಳ ಹಿಂದಷ್ಟೇ ಸ್ನೇಹಿತರ ಜೊತೆಗೆ ಖುಷಿಯಿಂದ ಈತ ಜನ್ಮ ದಿನವನ್ನು ಆಚರಿಸಿಕೊಂಡಿದ್ದ ಎನ್ನಲಾಗಿದ್ದು ಆತನ ಆತ್ಮಹತ್ಯೆಗೆ ಕಾರಣಗಳೇನು ಎಂದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.