ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿ ಕುರಿತು ಇಂದು ಕೇಂದ್ರದ ಅಧಿಕಾರಿಗಳ ತಂಡ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಸುತ್ತಮುತ್ತಲಿನ ಭಾಗಗಳನ್ನು ಪರಿಶೀಲನೆ ನಡೆಸಿತು. ಈ ವೇಳೆ ಜೆಡಿಎಸ್ ಪದಾಧಿಕಾರಿಗಳು ಆಗುಂಬೆ ರಸ್ತೆಗೆ ಅಳವಡಿಸಿರುವ ಕಮಾನನ್ನು ಎರಡು ಅಡಿಗಳಷ್ಟು ಎತ್ತರಕ್ಕೆ ಏರಿಸುವಂತೆ ಮನವಿ ಮಾಡಿದರು. 

ಶೃಂಗೇರಿಯ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಮಳೆಯಿಂದ ಸಂಭವಿಸಿದ ಹಾನಿ ಕುರಿತಾದ ಸಭೆಯನ್ನು ಆಯೋಜಿಸಲಾಗಿತ್ತು, ಸಭೆಯ ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರದ ಅಧಿಕಾರಿಗಳು ಶೃಂಗೇರಿ ಹೊರವಲಯದಲ್ಲಿ ಭಾರೀ ಮಳೆಯಿಂದಾಗಿ ಹಾನಿಗೀಡಾದ ಶೃಂಗೇರಿ ಹಾಗೂ ಉಡುಪಿಯನ್ನು ಸಂಪರ್ಕಿಸುವ  ನೇರಳೆಕೊಡಿಗೆ ರಸ್ತೆಗೆ ಭೇಟಿ ನೀಡಿದರು. 


ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಡಾ.ಅಣ್ಣಾದೊರೆ ಹಾಗೂ ಜೆಡಿಎಸ್ ನ ಪದಾಧಿಕಾರಿಗಳು ಪ್ರಸ್ತುತ ಘನ ವಾಹನಗಳು ಒಡದಾದ ರೀತಿಯಲ್ಲಿ ನೇರಳೆಕುಡಿಗೆ ಮಾರ್ಗದಲ್ಲಿ ನಿರ್ಮಿಸಿರುವ ಕಮಾನನ್ನು ಎರಡು ಅಡಿಗಳಷ್ಟು ಎತ್ತರಕ್ಕೇರಿಸಿ ಈ ಮಾರ್ಗದ ಮುಖಾಂತರ ಓಡಾಡುವ ಸ್ಥಳೀಯರ ಪಿಕಪ್ ಹಾಗೂ ಕೃಷಿಕರ ವಾಹನಗಳಿಗೆ ತೊಂದರೆ ಉಂಟಾಗದ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಕೋರಿದರು. 

ಈ ಭಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲದೇ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಜನರು ಅನಿವಾರ್ಯವಾಗಿ ಮಣಿಪಾಲ ಅಥವಾ ಶಿವಮೊಗ್ಗದ ಆಸ್ಪತ್ರೆಗಳಿಗೆ ತೆರಳಲೇಬೇಕಾಗುತ್ತದೆ, ಆದರೆ ಆಂಬುಲೆನ್ಸ್ ತೆರಳಲು ಸಹ ಕ್ಲಿಷ್ಟಕರವಾಗಿರುವುದರಿಂದ ಪ್ರಸ್ತುತ ಇರುವ ಕಮಾನನ್ನು ಎರಡು ಅಡಿಗಳಷ್ಟು ಎತ್ತರಕ್ಕೆ ಏರಿಸಿ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದರು. 

ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇಂಜಿನಿಯರ್ ಅವರಿಗೆ ನಿರ್ದೇಶನವನ್ನು ನೀಡಿದರು. ಅಂತೆಯೇ ಗ್ರಾಮೀಣ ಭಾಗದ ರಸ್ತೆಗಳು ಮಳೆಯಿಂದಾಗಿ ಗುಂಡಿಬಿದ್ದು ಹದಗೆಟ್ಟಿರುವುದರಿಂದ  ವೆಟ್ ಬ್ರಿಕ್ಸ್ ಹಾಕುವ ಸಲುವಾಗಿ 25,000 ರೂಪಾಯಿ ಹಣವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಿಡುಗಡೆ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. 

ಈ ಸಂದರ್ಭದಲ್ಲಿ ಜೆಡಿಎಸ್ ನ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ. ಅಣ್ಣಾದೊರೆ, ದೇವೇಂದ್ರ,ಕಾರ್ಯದರ್ಶಿ ದಿನೇಶ್ ಹೆಗ್ಡೆ, ಚಂದ್ರಶೇಖರ್, ಮಂಜುನಾಥ್ ಯಡದಾಳು, ಚೇತನ್ ಮತ್ತಿತರರು ಇದ್ದರು.