ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಚಾಕುವಿನಿಂದ ಇರಿದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಕೊಡಗಿನಲ್ಲಿ ನಡೆದಿದೆ. 

ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು ಮಾದಾಪುರ ನಿವಾಸಿ ತಾಹಿರಾ(38) ಕೊಲೆಯಾದ ಮಹಿಳೆ. ಇದೇ ಗ್ರಾಮದ ನಿವಾಸಿ ಪೂವಯ್ಯ ಎಂಬಾತ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ: ಶೃಂಗೇರಿ: ಅಕ್ರಮ ಗೋಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರ ಬಂಧನ ; ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ


ಅನೈತಿಕ ಸಂಬಂಧದ ಹಿನ್ನೆಲೆ ಇಬ್ಬರ ನಡುವೆಯೂ ಕಲಹ ಉಂಟಾಗಿ, ತಾಹಿರಾ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು. ಹತ್ಯೆಯ ಬಳಿಕ ಆರೋಪಿಯೇ ಹೆಂಡತಿಗೆ ಕರೆ ಮಾಡಿ ನಾನು ಕೊಲೆ‌ ಮಾಡಿದ್ದೇನೆ. ನೀನು ಮನೆಗೆ ಬಾ ಎಂದು ಹೇಳಿದ್ದಾನೆ. ಹೆಂಡತಿ‌ ಮನೆಗೆ ಬರುವುದರೊಳಗೆ ಆರೋಪಿ ನೇರವಾಗಿ ಮಾದಪುರ ಉಪಠಾಣೆಗೆ ಹೋಗಿ ನಡೆದ ಘಟನೆ ಹೇಳಿ ಚಾಕು ಸಮೇತ ಶರಣಗಾಗಿದ್ದಾನೆ.

ಇಬ್ಬರಿಗೂ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇರುವುದಾಗಿ ಪೊಲೀಸ್​ ತನಿಖೆ ನಂತರ ಮೇಲ್ನೋಟಕ್ಕೆ ತಿಳಿದು ಬಂದಿದೆ ಎನ್ನಲಾಗುತ್ತಿದ್ದು, ಮೊದಲಿನಿಂದಲೂ ತಾಹಿರಾ ಮನೆಗೆ ಪೂವಯ್ಯ ಬಂದು ಹೋಗಿ‌ ಮಾಡುತ್ತಿದ್ದನಂತೆ. ಇಂದು ಮುಂಜಾನೆ ಮನೆಗೆ ಬಂದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಳಿಕ ಮನೆಯಿಂದ ಹೋಗಿ ಸ್ವಲ್ಪ ಸಮಯ ಬಿಟ್ಟು ಮತ್ತೆ ತಾಹಿರಾ ಮನೆಗೆ ಬಂದಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ತಾಯಿಯ ಕೂಗಾಟ ಕೇಳಿ ಮನೆಗೆ ಬಂದ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ನೋಡಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ರಸ್ತೆ ಮಧ್ಯ ತಾಹಿರಾ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಘಟನಾ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದು ಮೃತ ತಾಹಿರಾ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.