ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಮಳೆಯ ತೀವ್ರತೆಗೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಭಾರಿ ಪ್ರಮಾಣದಲ್ಲಿ ಬಿರುಕು ಕಂಡಿದೆ.

ಇದನ್ನೂ ಓದಿ: ಜಯಪುರ: ಹೆಂಡತಿಯ ಕಾಟಕ್ಕೆ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಗಂಡ

ಚಿಕ್ಕಮಗಳೂರು ಜಿಲ್ಲೆಯ ಜಯಪುರ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಭಾರೀ ಪ್ರಮಾಣದ ಮಳೆಯಾಗಿದ್ದು ಮಳೆಯ ಆರ್ಭಟಕ್ಕೆ 15ಕ್ಕೂ ಹೆಚ್ಚು ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಾದ ಜಯಪುರ-ಕೊಗ್ರೆ ಸಂಪರ್ಕಿಸುವ ರಸ್ತೆ ಕುಸಿದಿದೆ. 

ಈ ರಸ್ತೆ ಸುಮಾರು 15ಕ್ಕಿಂತ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಈ ಹಿಂದೆ ಬಂದ ಮಳೆಯ ಪರಿಣಾಮ ಕೊಗ್ರೆ ಸೇತುವೆ ಕುಸಿದಿದ್ದು, ಈಗ ಜಯಪುರ ಹಾಗೂ ಕೊಗ್ರೆ ಸಂಪರ್ಕಿಸುವ ರಸ್ತೆಯಲ್ಲೂ ಬಿರುಕು ಮೂಡಿರುವುದು ಆತಂಕ ಮೂಡಿಸಿದೆ. ಒಂದುವೇಳೆ ಈ ರಸ್ತೆ ಸಂಪರ್ಕ ಕಡಿತಗೊಂಡಲ್ಲಿ ಇಲ್ಲಿನ ಜನ ಬಸರಿಕಟ್ಟೆ- ಹೇರೂರು ರಸ್ತೆ ಮೂಲಕ ಸಂಚರಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಂಬಂಧಪಟ್ಟವರು ಶೀಘ್ರವಾಗಿ ಗಮನಹರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ - ಸೈಮನ್ ಡಿ'ಸೋಜ, ಸ್ಥಳೀಯ

ಪರ್ಯಾಯ ಮಾರ್ಗ ಇಲ್ಲ;

ಕಳೆದೆರಡು ತಿಂಗಳಿನಲ್ಲಿ ಪ್ರಮಾಣದಲ್ಲಿ ಸುರಿದಿದ್ದ ಮಳೆಯಿಂದಾಗಿ ಕೊಗ್ರೆ ಸೇತುವೆ ಸಹ ಕುಸಿತ ಕಂಡಿತ್ತು, ಇದರಿಂದಾಗಿ ಇಲ್ಲಿನ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಕೊಂಡಿ ಕಳೆದುಕೊಂಡು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಮಳೆಯು ಆರಂಭವಾಗಿದ್ದು ಭೂಕುಸಿತದಂತಹ ಘಟನೆಗಳು ಸಂಭವಿಸಬಹುದಾದ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

ಶೃಂಗೇರಿ, ಜಯಪುರದ ಶಾಲಾ ಕಾಲೇಜುಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿನ ಗ್ರಾಮಗಳಿಂದ ತೆರಳುವುದರಿಂದಾಗಿ ರಸ್ತೆ ಸಮಸ್ಯೆ ಉಂಟಾದರೆ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗಳಿಗೆ ತೆರಳುವ ವಯೋವೃದ್ಧರಿಗೂ ತೀವ್ರ ಅನಾನುಕೂಲ ಉಂಟಾಗುತ್ತದೆ. ಸಂಬಂಧಿಸಿದ ಇಲಾಖೆ ಈ ಕುರಿತು ಗಮನ ಹರಿಸಿ ಗ್ರಾಮಸ್ಥರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ಗಮನಹರಿಸಬೇಕಿದೆ.