ಚಿಕ್ಕಮಗಳೂರು:
ಕಾರ್ಮಿಕ ಭದ್ರತಾ ಮಂಡಳಿ ರಚಿಸಲು ಮನವಿ :
ರಾಜ್ಯ ಅಸಂಘಟಿತ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಇಂದು ರಾಜ್ಯ ಅಸಂಘಟಿತ ಕಾರ್ಮಿಕರ ಪರವಾಗಿ ವಾಹನ ಚಾಲಕರ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಮಿಕರ ಭದ್ರತಾ ಮಂಡಳಿ ರಚನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವುದರ ಮುಖಾಂತರ ಪದಾಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರಿಗೆ ಮನವಿಯನ್ನು ಸಲ್ಲಿಸಿದರು. ಈ ಮನವಿಯನ್ನು ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಅನಿಲ್ ಕುಮಾರ್ ನಾರ್ವೆ ನೇತೃತ್ವದಲ್ಲಿ ರಾಜ್ಯ ಕಾರ್ಯದರ್ಶಿ ನಿಷ್ಮ ರಾಘವೇಂದ್ರ ಕೊಪ್ಪ ತಾಲ್ಲೂಕು ಅಧ್ಯಕ್ಷ ಶಶಿಧರ್ ಪ್ರಧಾನ ಕಾರ್ಯದರ್ಶಿ ಹರೀಶ್ ನಾರ್ವೆ ಚಿಕ್ಕಮಗಳೂರು ನಗರ ಕಮಿಟಿಯ ಉಷಕೆ.ಆರ್, ಪ್ರೇಮ ,ನವೀನ್ ,ರವಿ ,ಮಹಮ್ಮದ್ ಹಾಗೂ ಇನ್ನಿತರರು ಇದ್ದರು.
ಶೃಂಗೇರಿ: ಅಮ್ಮ ಫೌಂಡೇಶನ್ ವತಿಯಿಂದ ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳಿಗೆ ಕೋಟ್, ಬೆಲ್ಟ್ ಕೊಡುಗೆ
ಶೃಂಗೇರಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ ಇಂದು ಅಮ್ಮ ಫೌಂಡೇಶನ್ ವತಿಯಿಂದ ಟ್ರಸ್ಟ್ ನ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿ ಅವರು ಸಮವಸ್ತ್ರದ ಭಾಗವಾಗಿ ಕೋಟ್, ಬೆಲ್ಟ್ ಹಾಗೂ ಐಡಿ ಕಾರ್ಡ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶೃಂಗೇರಿಯ ಶಿಕ್ಷಣಾಧಿಕಾರಿಗಳು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಪ್ರಕಾಶ್, ಶಾಲೆಯ ಮುಖ್ಯೋಪಾಧ್ಯಾಯರಾದ ವೀಣಾ ಹಾಗೂ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರು, ಅಮ್ಮ ಫೌಂಡೇಶನ್ ನ ಸ್ವಯಂಸೇವಕರು ಭಾಗವಹಿಸಿದ್ದರು.
ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ:
ಜಾತ್ಯತೀತ ಜನತಾದಳ ಪಕ್ಷದ ಶೃಂಗೇರಿ ಕ್ಷೇತ್ರದ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಇಂದು ಶೃಂಗೇರಿಯಲ್ಲಿ ನೆರವೇರಿತು. ಶೃಂಗೇರಿಯ ಕಾಳಿಕಾಂಬ ದೇವಾಲಯದ ಸಮೀಪದ ಕಛೇರಿಯ ಉದ್ಘಾಟನೆಯನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರು ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಹಿರಿಯ ಮುಖಂಡರಾದ ವೆಂಕಟೇಶ್, ದಿವಾಕರ್ ಭಟ್, ಸೇರಿದಂತೆ ಅನೇಕ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕುರಿತು ಮಾತನಾಡಿದ ಸುಧಾಕರ್ ಎಸ್ ಶೆಟ್ಟಿ ಅವರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಹೋರಾಟ ನಡೆಸಬೇಕು, ಅಭಿವೃದ್ದಿಯ ಮೂಲ ಮಂತ್ರವನ್ನಿಟ್ಟುಕೊಂಡು ಜೆಡಿಎಸ್ ಚುನಾವಣೆ ಎದುರಿಸಲಿದೆ ಎಲ್ಲಾ ವರ್ಗದ ಜನರಿಗೆ ನೆರವಾಗಲಿದೆ ಎಂದರು. ಈ ಸಂದರ್ಭದಲ್ಲಿ ಅನೇಕರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಜೆಡಿಎಸ್ ನ್ನು ಸೇರ್ಪಡೆಗೊಂಡರು.
ನಿಧನರಾದ ಉಮೇಶ್ ಕತ್ತಿ ಅವರಿಗೆ ಜಿಲ್ಲಾ ಬಿಜೆಪಿಯಿಂದ ಶ್ರದ್ಧಾಂಜಲಿ :
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವತಿಯಿಂದ ನಿನ್ನೆ ತಡರಾತ್ರಿ ಹೃದಯಘಾತದಿಂದ ನಿಧನರಾದ ಕರ್ನಾಟಕ ಘನ ಸರ್ಕಾರದ ಸಂಪುಟ ದರ್ಜೆ ಸಚಿವರಾದ ಸನ್ಮಾನ್ಯ ಶ್ರೀ ಉಮೇಶ್ ಕತ್ತಿ ಅವರಿಗೆ ಚಿಕ್ಕಮಗಳೂರಿನ ಬಿಜೆಪಿ ಕಛೇರಿ ಪಾಂಚಜನ್ಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ಸಿ ಕಲ್ಮರುಡಪ್ಪ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದೇವರಾಜ್ ಶೆಟ್ಟಿ,ಶ್ರೀ ರವೀಂದ್ರ ಬೆಳ್ವಾಡಿ,ಪಕ್ಷದ ಮುಖಂಡರು,ಪಕ್ಷದ ವಿವಿಧ ಸ್ಥರಗಳ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿವಮೊಗ್ಗ:
ದಲಿತರು ಹಿಂದೂಗಳಲ್ವಾ ? ಕಿಮ್ಮನೆ ಕಿಡಿ
ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರ ಜೊತೆ ಒಟ್ಟಾಗಿ ಹೋಗುತ್ತೇವೆ ಎಂದು ಹೇಳುವ ಕಾರಣಕ್ಕೆ ಜನ ನಂಬದೆ ಇರಬಹುದು ಆದರೆ ಬಿಜೆಪಿ ಪಕ್ಷ ನಮಗೆ ಆ ಸಮುದಾಯದ ಮತವೇ ಬೇಡ ಎಂದು ಹೇಳುತ್ತಾರೆ ಇದರಿಂದಾಗಿ ಕೋಮು ಗಲಭೆ ಹೆಚ್ಚುವುದಿಲ್ಲವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಹೋರಾಟ ಮಾಡುತ್ತಾರೆ ಈದ್ಗಾ ಮೈದಾನದಲ್ಲಿ ಗಣಪತಿ ವಿಚಾರಕ್ಕೆ ಹೋರಾಟ ಮಾಡ್ತಾರೆ ಅದರ ಅವಶ್ಯಕತೆ ಏನಿದೆ ? ಹಸಿವಿನಿಂದ ಜನರು ಸಾಯ್ತಾ ಇದ್ದಾರೆ, ಮಳೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಇದಕ್ಕೆ ಬಿಜೆಪಿ ಯಾಕೆ ಹೋರಾಟ ಮಾಡುವುದಿಲ್ಲ, ಹಲವು ದಿನಗಳಿಂದ ಕರ್ನಾಟಕದಲ್ಲಿ ಕೋಮುಗಲಭೆ ನೆಡೆಯುತ್ತಿದೆ ಇದರ ಬಗ್ಗೆ ಪ್ರಧಾನಿ ಮೋದಿ ಏನಾದರೂ ಮಾತನಾಡಿದರೆ ಎಂದು ಛಾಟಿ ಬೀಸಿದರು. ಬಿಜೆಪಿಯವರು ಹಿಂದೂ ಮುಸ್ಲಿಂ ನಡುವೆ ಗಲಾಟೆ ಅಲ್ಲ ಅದು ದಲಿತರು ಮತ್ತು ಮುಸ್ಲಿಂ ಮದ್ಯೆ ಗಲಾಟೆ ಎನ್ನುತ್ತಾರೆ. ಹಾಗಾದರೆ ಬಿಜೆಪಿ ದೃಷ್ಟಿಯಲ್ಲಿ ದಲಿತರು ಹಿಂದೂಗಳಲ್ವಾ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಪಕ್ಷವೇ ಉಳಿದುಕೊಂಡರೆ ಈ ದೇಶ ಒಂದು ದೇಶವಾಗಿ ಉಳಿಯುವುದಿಲ್ಲ. ಜಾತಿ, ಮತ ಎಂದು ವಿಭಜನೆ ಮಾಡುತ್ತಿರುವ ಪಕ್ಷವನ್ನು ಜನರು ಕಿತ್ತೊಗೆಯಬೇಕು ಎಂದರು.
ಪತ್ನಿಯನ್ನೇ ಹತ್ಯೆ ಮಾಡಿದ ಪತಿ :
ಶಿವಮೊಗ್ಗ ನಗರದಲ್ಲಿನ ಬೈಪಾಸ್ ರಸ್ತೆಯ ಪ್ರಿಯಾಂಕಾ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಘಟನಾ ಕುರಿತಾದ ವಿಷಯ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ಮೆಸ್ಕಾಂ ನೌಕರನಾಗಿ ಕೆಲಸ ಮಾಡುತ್ತಿದ್ದ ದಿನೇಶ್ 12 ವರ್ಷಗಳ ಹಿಂದೆ ಇಲ್ಲಿನ ಮತ್ತಿಘಟ್ಟ ಗ್ರಾಮದ ಮಂಜುಳಾ ಅವರನ್ನು ಮದುವೆಯಾಗಿದ್ದ, ಈ ದಂಪತಿಗೆ 10 ವರ್ಷದ ಓರ್ವ ಹೆಣ್ಣು ಮಗಳು ಹಾಗೂ 4 ವರ್ಷದ ಪುಟಾಣಿ ಇನ್ನೋರ್ವ ಹೆಣ್ಣುಮಗಳು ಇದ್ದಾಳೆ. ದಿನೇಶ್ ಕೆಲಸ ಮುಗಿಸಿಕೊಂಡು ಪ್ರತಿದಿನ ತಡವಾಗಿ ಬರುತ್ತಾರೆ ಎಂಬ ಕಾರಣಕ್ಕೆ ದಂಪತಿಗಳ ನಡುವೆ ಸದಾ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು ಅದೇ ವಿಚಾರವಾಗಿ ಮಂಗಳವಾರ ರಾತ್ರಿ ಕೂಡ ಇಬ್ಬರು ಜಗಳವಾಡಿದ್ದಾರೆ ಎನ್ನಲಾಗಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ ಪರಿಣಾಮ, ದಿನೇಶ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಮಂಜುಳಾ ಅವರ ಕುತ್ತಿಗೆ ಕೊಯ್ದಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಟ್ಟಿನಿಂದ ಕೊಲೆ ಮಾಡಿ ಹೆದರಿದ ಪತಿ ದಿನೇಶ್ ತಾನೂ ಬ್ಲೇಡ್‌ನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಿನೇಶ್ ಚಾಕುವಿನಿಂದ ಇರಿದಾಗ ಮಂಜುಳಾ ಅರಚಾಡಿದ್ದು, ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಈ ವೇಳೆಗೆ ಘಟನಾ ಸ್ಥಳಕ್ಕೆ ಧಾವಿಸಿದ ತುಂಗಾ ನಗರ ಠಾಣೆಯ ಪೊಲೀಸರು ದಿನೇಶ್‌ನನ್ನು ಶೀಘ್ರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಬಚಾವಾಗುವಂತೆ ಮಾಡಿದ್ದಾರೆ.
ಹರ್ಷನ ಹತ್ಯೆ ನಂತರ ಕೋಮು ಪ್ರಚೋದನೆ ಹೆಚ್ಚಾಗಿದೆ : ಮೂಲಗಳಿಂದ ಮಾಹಿತಿ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಬರ್ಬರವಾಗಿ ಹತ್ಯೆಗೀಡಾಗಿದ್ದ 27 ವರ್ಷದ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಹರ್ಷನ ಹಂತಕರು ರಾಜ್ಯದಲ್ಲಿ ಅಶಾಂತಿಯ ಪರಿಸ್ಥಿತಿಯ ನಂತರ ಹಿಂದೂ ಸಮುದಾಯದ ಬಗ್ಗೆ ಆಳವಾದ ದ್ವೇಷವನ್ನು ಬೆಳೆಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ ಎಂದು ಮೂಲಗಳು ಬುಧವಾರತಿಳಿಸಿವೆ. ಸಂವೇದನಾಶೀಲ ಕೊಲೆಗೆ ಸಂಬಂಧಿಸಿದಂತೆ ಎನ್‌ಐಎ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಕೊಲೆಯನ್ನು ಕಾರ್ಯಗತಗೊಳಿಸಿದ ನಂತರ ಹಂತಕರು ಅಪರಾಧದ ಸ್ಥಳದಲ್ಲಿ ಘೋಷಣೆಗಳನ್ನು ಕೂಗಿದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಪೌರತ್ವ ಕಾಯ್ದೆ, 2019 ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಸುತ್ತಲಿನ ಬೆಳವಣಿಗೆಗಳು, ಹಿಜಾಬ್ ಬಿಕ್ಕಟ್ಟು ಮತ್ತು ಗೋಹತ್ಯೆ ಬಗ್ಗೆ ಬಜರಂಗದಳ ಕಾರ್ಯಕರ್ತರು ನಡೆಸಿದ ಆಕ್ರಮಣಕಾರಿ ಅಭಿಯಾನವು ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ಆಳವಾದ ದ್ವೇಷವನ್ನು ಬೆಳೆಸಿಕೊಳ್ಳುವಂತೆ ಮಾಡಿತು. ಆರೋಪಿಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಯೋಜಿಸುತ್ತಿದ್ದಾರೆ ಎಂದು ಎನ್‌ಐಎ ತನಿಖೆ ತೋರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗು :
ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಸಾವು :
ಹುಟ್ಟು ಹಬ್ಬವನ್ನು ಆಚರಿಸಿ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಮೃತನಾಗಿ ಪತ್ತೆಯಾದ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ಗದಗ ಜಿಲ್ಲೆಯ ಯೆಂಡಿಗೇರಿ ಗ್ರಾಮದ ನಿವಾಸಿ ಕೊಡಗು ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರ ವಾಹನ ಚಾಲಕರಾಗಿ ಸೇವೆ ಸಲ್ಲಿಸುತಿದ್ದ ವಿನಯ್ ಕುಮಾರ್ ಯೆಂಡಿಗೇರಿ ಮೃತ ದುರ್ದೈವಿ. ಮೃತ ವ್ಯಕ್ತಿಯು ಗದಗ ಜಿಲ್ಲೆಯ ಯೆಂಡಿಗೇರಿ ಗ್ರಾಮದಿಂದ ಕೊಡಗು ಜಿಲ್ಲೆಯ ಕೊಡಗು ಡಿ.ಸಿ.ಸಿ ಬ್ಯಾಂಕ್ ನ ಕಾರು ಚಾಲಕನಾಗಿ ನೇಮಕಗೊಂಡಿದ್ದರು. ಸುಮಾರು, 18 ತಿಂಗಳುಗಳಿಂದ ಬ್ಯಾಂಕ್ ಅಧ್ಯಕ್ಷರ ಕಾರು ಚಾಲಕನಾಗಿ ಸೇವೆ ಸಲ್ಲಿಸುತಿದ್ದರು. ಮೇ ತಿಂಗಳಲ್ಲಿ ಮೃತರು ವಿವಾಹವಾಗಿದ್ದರು. ವಿರಾಜಪೇಟೆ ಡಿ.ಸಿ.ಸಿ. ಬ್ಯಾಂಕ್‌ನ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ವಿನಯ್, ಮಂಗಳವಾರ ಬೆಳಿಗ್ಗೆ 9.30 ಗಂಟೆಯಾದರೂ ಹೊರ ಬಂದಿರಲಿಲ್ಲ. ವಿರಾಜಪೇಟೆ ಡಿ.ಸಿ.ಸಿ. ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಸುಬ್ಬಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೀಗ ಒಡೆದು ಒಳ ಪ್ರವೇಶ ಮಾಡಿದ ಪೊಲೀಸರಿಗೆ ಕೋಣೆಯಲ್ಲಿ ಅಂಗಾತವಾಗಿ ಬಿದ್ದಿರುವಂತೆ ವಿನಯ್ ಅವರ ಮೃತದೇಹ ಪತ್ತೆಯಾಗಿದೆ. ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಸ್ವಗೃಹವಾದ ಗದಗ ಜಿಲ್ಲೆಗೆ ರವಾನಿಸಲಾಯಿತು.
ಭಾರೀ ಮಳೆಯ ಮುನ್ಸೂಚನೆ :
ಕರ್ನಾಟಕ ಹವಾಮಾನದ ಕುರಿತು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಆಗಲಿದೆ. ಇದರಲ್ಲಿ ದಕ್ಷಿಣ ಒಳನಾಡಿನ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಗುರುವಾರ ಒಂದು ಸುಮಾರು 20 ಸೆಂ.ಮೀ.ಗಿಂತಲೂ ಅತ್ಯಧಿಕ ಭಾರಿ ಮಳೆ ಬೀಳಲಿದೆ. ಹೀಗಾಗಿ ಈ ಎರಡು ಜಿಲ್ಲೆಗೆ ರೆಡ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ ಎಂದು ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ, ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಕೊಡಗಿಗೆ ಸೆಪ್ಟಂಬರ್ 10ರವರೆಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದಂತೆ ಒಡಳನಾಡಿನ ಇನ್ನಿತರ ಜಿಲ್ಲೆಗಳಾದ ಬೀದರ್, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ಚಿತ್ರದುರ್ಗ, ಕೊಡಗು, ಶಿವಮೊಗ್ಗ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರಿ ಮಳೆ ಬೀಳಲಿದೆ. ಹೀಗಾಗಿ ಅವೆಲ್ಲ ಜಿಲ್ಲೆಗಳಿಗೆ ಶನಿವಾರದವರೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


0 Comments