ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬ ಯುವಕನ ಜೊತೆಗೆ ಮದುವೆ ನಿಗದಿಯಾದ ಕಾರಣಕ್ಕೆ ಪ್ರಿಯಕರನು ಪ್ರೇಯಸಿಯ ಮೇಲೆ ಹಲ್ಲೆ ಮಾಡಿದ್ದಾನೆ ಇದರಿಂದ ಕುಪಿತಗೊಂಡ ಆಕೆಯ ಸಂಬಂಧಿಕರು ಮನೆಯನ್ನು ಧ್ವಂಸಮಾಡಿರುವ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ.

ಇದನ್ನೂ ಓದಿ : ಬೆಲೆಬಾಳುವ ಗಂಧದ ಮರಗಳನ್ನು ಕದ್ದೊಯ್ದ ಕಳ್ಳರು; ಪ್ರಕರಣ ದಾಖಲು

ಮಾರ್ನಮಿಬೈಲ್‌ನ ಯುವಕ ಭದ್ರಾವತಿಯ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಹಲವು ವರ್ಷಗಳಿದ್ದ ಪರಸ್ಪರ ಪ್ರೀತಿ ಇತ್ತೀಚಿಗೆ ಕುಂದಿತ್ತು. ಕಾರಣ ಯುವತಿ ಮನೆಯವರು ಆಕೆಗೆ ತಮ್ಮದೇ ಧರ್ಮದ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. 


ಇದರಿಂದಾಗಿ ಸಿಟ್ಟಿಗೆದ್ದ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ್ದ ಕುರಿತಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. FIR ದಾಖಲಾದ ಬಳಿಕ ಯುವತಿ ಮನೆಯವರು ಮಾರ್ನಮಿಬೈಲ್‌ ನ ಯುವಕನಿದ್ದ ಬಾಡಿಗೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಸೇಡಿಗೆ ಪ್ರತಿ ಸೇಡು ಎನ್ನುವಂತೆ, ಅವರ ಮೇಲೆ ಇವರು, ಇವರ ಮೇಲೆ ಅವರು ಹರಿಹಾಯ್ದಿದ್ದು, ಶಿವಮೊಗ್ಗ ಮಾರ್ನಮಿಬೈಲ್‌ನಲ್ಲಿದ್ದ  ಬಾಡಿಗೆ ಮನೆ ಸಂಪೂರ್ಣ ಧ್ವಂಸಗೊಂಡಿದೆ.

ಹಲ್ಲೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದ ದೊಡ್ಡ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


ಶಿವಮೊಗ್ಗದ ಕಡೆಗೆ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ 85 ಲಕ್ಷ ನಗದು ಜಪ್ತಿ: ನಾಲ್ವರು ಸೆರೆ :

ಕಾರಿನಲ್ಲಿ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದು ಲಕ್ಷಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. 

ಕಾರಿನಲ್ಲಿ ಅಕ್ರಮವಾಗಿ ನಗದು ಸಾಗಾಣಿಕೆ ನಡೆಸುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾರೆ. ಬಳಿಕ ಕಾರ್ ಹಿಂದೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಅವರನ್ನು ಬಿಡದ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. 


ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್(31), ಇಮ್ರಾನ್ ಖಾನ್(27) ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್(23) ಮತ್ತು ಸಯ್ಯದ ಅಮೀನ್(29)ಎಂದು ಗುರುತಿಸಲಾಗಿದೆ.  

ಈ ಆರೋಪಿಗಳು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಪೊಲೀಸರು ಕಾರಿನ ಬ್ಯಾಗಿನಲ್ಲಿ ತುಂಬಿಟ್ಟ 500, 200, 100 ಹಾಗೂ 50 ರೂ. ಮುಖಬೆಲೆಯ ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯನ್ನು ಹಾನಗಲ್ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್‌ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದ ತಂಡ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.