ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಗರ್ಭಿಣಿಯ ಮೇಲೆ ಆಕೆಯ ಸಂಬಂಧಿಕನೇ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ನಿಲ್ಲದ ಆನೆ ದಾಂಧಲೆ; ಅಪಾರ ಪ್ರಮಾಣದ ಬೆಳೆ ಹಾನಿ, ಆತಂಕದಲ್ಲಿ ಕೃಷಿಕರು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಐದು ತಿಂಗಳ ಗರ್ಭಿಣಿ ಮೇಲೆ ಮಾವ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ, ಅತ್ತೆ ಮತ್ತು ನಾದಿನಿಯರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಡನೊಂದಿಗೆ ಗರ್ಭಿಣಿಯು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಗಂಡ ಕೆಲಸಕ್ಕೆ ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿದ ಮಾವ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಅತ್ತೆ ಮತ್ತು ನಾದಿನಿಯರು ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ, ಜತೆಗೆ ಮಗು ತೆಗೆಸುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ತನ್ನ ಹೆಣ್ಣು ಮಕ್ಕಳಿಗೆ ಆಸ್ತಿ ದಾನಪತ್ರ ಮಾಡಿಕೊಟ್ಟಿದ್ದು ವರದಕ್ಷಿಣೆ ತರುವಂತೆ ಗರ್ಭಿಣಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಗರ್ಭಿಣಿ ತನ್ನ ಅತ್ತೆ-ಮಾವ, ನಾದಿನಿಯರು ಸೇರಿ ಎಂಟು ಮಂದಿ ವಿರುದ್ಧ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ಆರಂಭಿಸಿದ್ದಾರೆ.