ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಹಾಡಹಗಲೇ ಯಾರದೇ ಭಯವಿಲ್ಲದೆ ಕಿಡಿಗೇಡಿಗಳು ಒಂದೇ ಗ್ರಾಮದ ಮನೆಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ತಿಂಗಳಿನಲ್ಲಿ ಇದೇ ಕೋರನಕುಡಿಗೆ ಗ್ರಾಮದ ಮೂರು ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಕಿಡಿಗೇಡಿಗಳು ಕಳೆದ ಬಾರಿ ಬೆಂಕಿ ಹಚ್ಚಿದ್ದ ಕೊರನಕುಡಿಗೆ ಮನ್ಸೂರ್ ಎಂಬುವವರ ಮನೆಗೆ ಇಂದು ಮತ್ತೆ ಬೆಂಕಿ ಹಾಕಿದ್ದಾರೆ.
ಘಟನಾ ಸಂಬಂಧ ತನಿಖೆ ಮುಂದುವರೆದಿದ್ದು ಈ ಕುರಿತು ನಿಗಾವಹಿಸಲಾಗಿತ್ತು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು - ಗುಂಜನ್ ಆರ್ಯ,DYSP ಕೊಪ್ಪ
ಇಂದು ಸಂಜೆಯ ವೇಳೆಗೆ ಈ ಘಟನೆ ನಡೆದಿದ್ದು ಬೆಂಕಿ ಉರಿಯುವುದನ್ನು ಕಂಡ ಸ್ಥಳೀಯರು ಕೂಡಲೇ ಬೆಂಕಿ ನಂದಿಸಿದ್ದಾರೆ. ಮನೆಯ ಹಿಂಭಾಗದಲ್ಲಿದ್ದ ಟಾರ್ಪಲ್ ಸೇರಿದಂತೆ ಕೆಲ ವಸ್ತುಗಳು ಹಾನಿಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದರಿಂದ ಈ ಘಟನೆ ಕೆಲ ಸಮಯದ ಬಳಿಕ ಬೆಳಕಿಗೆ ಬಂದಿದೆ.
ಮೊದಲಿಗೆ ಈ ಗ್ರಾಮದ ಕಿರಣ್ ಆಚಾರ್ಯ ಎಂಬುವವರ ಬೈಕ್ ಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ ದುಷ್ಕರ್ಮಿಗಳು ನಂತರದಲ್ಲಿ, ಸಂತೋಷ್ ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದರು ಈ ಬಳಿಕ ಇದೀಗ ಎರಡನೇ ಬಾರಿಗೆ ಕೋರನಕುಡಿಗೆ ಗ್ರಾಮದ ಮನ್ಸೂರ್ ಮನೆಗೆ ಬೆಂಕಿ ಹಚ್ಚಲಾಗಿದೆ.
ಈ ಘಟನೆಯಿಂದ ಗ್ರಾಮಸ್ಥರು ತೀವ್ರವಾದ ಆತಂಕವನ್ನು ವ್ಯಕ್ತಪಡಿಸಿದ್ದು ಮತ್ತೆ ಮತ್ತೆ ಇಂತಹ ಘಟನೆಗಳು ಸಂಭವಿಸುತ್ತಲೇ ಇದ್ದು ಮನೆಯಲ್ಲಿರುವ ವೃದ್ಧರಿಗೆ, ಪುಟ್ಟ ಮಕ್ಕಳಿಗೆ ಏನಾದರೂ ಅಪಾಯ ಸಂಭವಿಸಿದರೆ ಯಾರನ್ನು ಕೇಳುವುದು ಎಂಬುದಾಗಿ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಘಟನಾ ಸಂಬಂಧ ಈ ಹಿಂದೆ DYSP ಗುಂಜನ್ ಆರ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಆದರೆ ಘಟನೆ ಮಾಸುವ ಮುನ್ನವೇ ಇಂತಹುದೇ ಘಟನೆಗಳು ನಡೆಯುತಿದ್ದರೂ ಆರೋಪಿತರ ಸುಳಿವು ಸಿಗದೇ ಇರುವುದು ವಿಶೇಷವಾಗಿದೆ.
ಇಂದು ಪುನಃ ಘಟನಾ ಸ್ಥಳಕ್ಕೆ ಶೃಂಗೇರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ಈ ಕುರಿತಾದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.





0 Comments