ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಪತ್ನಿಯ ಕಾಟಕ್ಕೆ ಬೇಸತ್ತ ಪತಿ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೋಕನಾಥಪುರ ಸಮೀಪದ ಗೋಳಿಹಕ್ಲುವಿನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಅರವಿಂದ (42) ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು 

ಮೃತ ಅರವಿಂದ ಹಾಗೂ ರೇಖಾ ಅವರಿಗೆ 12 ವರ್ಷಗಳ ಹಿಂದೆ ವಿವಾಹವಾಗಿದ್ದು ಈ ಜೋಡಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಕಳೆದ 2ನೇ ತಾರೀಕು ಅರವಿಂದ್ ಪತ್ನಿ ರೇಖಾ ಜಯಪುರ ಪೊಲೀಸ್ ಠಾಣೆಗೆ ಪತಿ ಅರವಿಂದ ಹಾಗೂ ಅತ್ತೆ, ಮಾವನ ವಿರುದ್ದ ದೂರು ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿರುವ ಅರವಿಂದ ಜಯಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜ್ಯೋತಿ ಸರಿಯಾದ ತನಿಖೆ ನಡೆಸದೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಯಪುರದಲ್ಲಿ ಮನೆಮಾಡುವಂತೆ ನನಗೆ ಸೂಚಿಸಿದ್ದು, ಇದರಿಂದಾಗಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾದ್ಯವಾಗದು ಎಂಬ ಅಳಲನ್ನು ಡೆತ್ ನೋಟ್ ನಲ್ಲಿ ಬರೆದಿದ್ದು, ತಂದೆ ತಾಯಿಯನ್ನು ನೋಡಿಕೊಳ್ಳಲು ಸಾದ್ಯವಾಗದ ನಾನು ಬದುಕಿ ಜೀವನ ಪೂರ್ತಿ ಸಾಯುವ ಬದಲು ಒಮ್ಮೆಗೆ ಸಾಯುತ್ತೇನೆ ಎಂದು ಡೆತ್ ನೋಟ್ ನಲ್ಲಿ ಮೃತ ಅರವಿಂದ್ ಉಲ್ಲೇಖಿಸಿದ್ದಾರೆ.


ನನ್ನ ಸಾವಿಗೆ ಪತ್ನಿ ರೇಖಾ, ಮಾವ ದತ್ತಾತ್ರೇಯ, ರೇಖಾಳ ಅಕ್ಕ ರಶ್ಮಿ ಮತ್ತು ರಶ್ಮಿಯ ಗಂಡ ಅರುಣ ಮತ್ತು ವೆಂಕಟೇಶ, ಬರಗೋಡು ರಮಣ ಹಾಗೂ ರಾಜು ಕಾರಣರಾಗಿದ್ದು ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಡೆತ್ ನೋಟ್ ನಲ್ಲಿ ಕೋರಿದ್ದು, ಗೋಳಿಹಕ್ಲು ವಾಟ್ಸಪ್ ಗ್ರೂಪ್ ಗೆ ಡೆತ್ ನೋಟ್ ಫೋಟೋವನ್ನು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿ ಅರುಣ್ ಅಪ್ಪುಕೋಡಿಗೆ ತಿಳಿಸಿದ್ದಾರೆ.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಮೃತರ ತಂದೆ ಸದಾನಂದ ರಾವ್ ದೂರು ದಾಖಲಿಸಿದ್ದು, ಸ್ಥಳಕ್ಕೆ ಡಿವೈಎಸ್ಪಿ ಗುಂಜನ್ ಆರ್ಯ, ಸಿಪಿಐ ಮಂಜುನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಹಾಗೂ ಅಗತ್ಯ ಮಾಹಿತಿಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಕಾರ್ಯವನ್ನು ಮುಂದುವರೆಸಿದ್ದಾರೆ.

ಘಟನಾ ಸಂಬಂಧ ಮೃತರ ಪೋಷಕರು ಹಾಗೂ ಸಂಬಂಧಿಕರು ದುಃಖವನ್ನು ವ್ಯಕ್ತಪಡಿಸಿದ್ದು, ಈ ಸಾವಿನ ಕುರಿತು ಪೊಲೀಸರು ಸೂಕ್ತವಾದ ತನಿಖೆಯನ್ನು ನಡೆಸಿ ಮೃತನ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.