ಜಯಪುರ: (ನ್ಯೂಸ್ ಮಲ್ನಾಡ್ ವರದಿ) ನಾಡಿನಾದ್ಯಂತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಗಣೇಶೋತ್ಸವದ ಆಚರಣೆ ನಡೆಯುತ್ತಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡುಗಾರಿನಲ್ಲಿ ಸಹ ಅದ್ಧೂರಿಯಾದ ಗಣೇಶೋತ್ಸವದ ಆಚರಣೆ ನೆರವೇರಿತು.
ಇದನ್ನೂ ಓದಿ: ಶೃಂಗೇರಿ: ಸರ್ವಧರ್ಮ ಸಮನ್ವಯ ಗಣಪತಿ ಸೇವಾ ಸಮಿತಿ ಆಯೋಜಿಸಿದ್ದ ಗಣೇಶೋತ್ಸವ ಸಂಪನ್ನ
ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿದ ವಿಕಾಸ ಪರಿಷತ್ತಿನ ಪ್ರಾಂತ ಕಾರ್ಯಕಾರಿಣಿ ಸದಸ್ಯ ನಯನ ಶೃಂಗೇರಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಠೋರವಾದ ಶಿಕ್ಷೆಯನ್ನು ಅನುಭವಿಸಿದವರಲ್ಲಿ ವೀರ ಸಾವರ್ಕರ್ ಒಬ್ಬರು, ಪ್ರಚಾರದ ಹುಚ್ಚಿಗೆ, ರಾಜಕಾರಣಕ್ಕಾಗಿ ಕೆಲವರು ಅವರ ಕುರಿತು ಕನಿಷ್ಠವಾಗಿ ಮಾತನಾಡುತ್ತಿರುವುದು ಖಂಡನಾರ್ಹ ಹಾಗೂ ಸಹಿಸಲು ಅಸಾಧ್ಯ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಸ್ವಾತಂತ್ರ ವೀರರ ಬಗ್ಗೆ ಅಪಮಾನಕರವಾಗಿ ಮಾತನಾಡುವುದನ್ನು ತಾಯಿ ಭಾರತಿ ಕ್ಷಮಿಸುವುದಿಲ್ಲ ಎಂದರು.
ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮ ಕ್ರಾಂತಿಕಾರಿ ನಿಲುವಿನಿಂದ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ ಮತ್ತು ಈ ಕಾರಣಕ್ಕಾಗಿ ಆಂಗ್ಲರಿಂದ ಅತೀ ಹೆಚ್ಚು ಶಿಕ್ಷೆ ಅನುಭವಿಸಿದ ಸಾವರ್ಕರ್ ಅವರನ್ನು ಭಾರತದ ಜನ ವೀರ ಸಾವರ್ಕರ್ ಎಂದು ಕರೆದಿದ್ದಾರೆ. ಅವರಿಗೆ ಗೌರವ ನೀಡುವ ಕೆಲಸ ಭಾರತೀಯರಾದ ನಮ್ಮ ಆದ್ಯ ಕರ್ತವ್ಯವಾಗಿದೆ. ಯಾವ ಸ್ವಾತಂತ್ರ ಹೋರಾಟಗಾರರ ಬಗೆಯೂ ಕನಿಷ್ಠವಾಗಿ ಮಾತನಾಡುವ ಹಾಗೂ ಅಪಪ್ರಚಾರ ಮಾಡುವವರಿಗೆ ವಿರೋಧವಿದೆ ಎಂದರು.
ಮಾನವ ತನ್ನ ದುರಾಸೆಯ ಕಾರಣಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುವ ಮೂಲಕ ನೆಲ, ಜಲ ಹಾಗೂ ಗಾಳಿಯನ್ನು ಕಲುಷಿತ ಮಾಡಿದ ಕಾರಣಕ್ಕಾಗಿ ಅಕಾಲಿಕ ಮಳೆ, ಅತೀವೃಷ್ಠಿ, ಅನಾವೃಷ್ಠಿ ನಡೆಯುತ್ತಿದೆ. ಜಾಸ್ತಿ ಪಾಪ ಮಾಡಿದರೆ ಸಮುದ್ರ ಉಕ್ಕಿ ಬರುತ್ತದೆ ಮಾನವಕುಲ ನಾಶವಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು ಅದು 2008ರ ಸುನಾಮಿಯಿಂದ ನಿಜವಾಗಿದೆ. ಹೆಚ್ಚಿನ ಶಿಕ್ಷಣ ವಿಲ್ಲದ ನಮ್ಮ ಪೂರ್ವಜರು ನೈತಿಕವಾಗಿ, ಪಾಪ ಪುಣ್ಯಗಳ ಪ್ರಜ್ಞೆಯೊಂದಿಗೆ ಬದುಕುತ್ತಿದ್ದರು. ಆದರೆ ಇಂದಿನ ವಿದ್ಯಾವಂತ ಸಮಾಜ ಹಣದ ಹಿಂದೆ ಬಿದ್ದು, ನೈತಿಕತೆಯನ್ನು, ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆತಿರುವುದೇ ನಮ್ಮ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಬಾಲಗಂಗಾದರ ತಿಲಕರು ಆರಂಭಿಸಿದ ಗಣೇಶೋತ್ಸವ ಇಂದು ದೇಶವ್ಯಾಪಿಯಾಗಿದೆ. ಹಿಂದೂ ಸಮಾಜ ತನ್ನ ಪರಂಪರೆ, ತನ್ನ ಸಂಸ್ಕೃತಿಯನ್ನು ಮರೆತ ಪರಿಣಾಮ ವಿವಾಹ ವಿಚ್ಚೇದನಗಳು ,ವೃದ್ಧಾಶ್ರಮಗಳು ಹೆಚ್ಚುತ್ತಿವೆ, ಕೂಡು ಕುಟುಂಬಗಳು ಒಡೆಯುತ್ತಿವೆ. ಸ್ವಾರ್ಥದ ಹಿಂದೆ ಬಿದ್ದಿರುವ ಕಾರಣ ಅನ್ಯಮತೀಯರ, ಧರ್ಮನಿಂದಕರ, ದೇಶದ್ರೋಹಿಗಳ ಉಪಟಳ ಹೆಚ್ಚುತ್ತಿದೆ, ಧರ್ಮಪ್ರಸರಣ ಹಾಗೂ ಧರ್ಮದ ಕುರಿತಾಗಿ ನಿಲುವು ಹೆಚ್ಚಾದಾಗ ಮಾತ್ರ ನಮ್ಮನ್ನು ಯಾರೂ ಕೂಡ ಒಡೆಯಲು ಸಾಧ್ಯವಿಲ್ಲ ಎಂದರು.
ಗಣೇಶೋತ್ಸವದಲ್ಲಿ ಹಾಡುಗಾರು ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಪರಮೇಶ್ವರಪ್ಪ ಹಾಗೂ ಪ್ರಗತಿಪರ ಕೃಷಿಕ ಮಂಜಪ್ಪ ಗೌಡರನ್ನು ಸನ್ಮಾನಿಸಲಾಯಿತು. ಸ್ಥಳೀಯರಿಗಾಗಿ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲಾಗಿತ್ತು. ಗಣಪತಿಯ ಮೂರ್ತಿಯನ್ನು ವಾದ್ಯ ಘೋಷ್ಠಿಗಳ ಮೆರವಣಿಗೆಯಲ್ಲಿ ಕೊಂಡೊಯ್ದು ಸೀತಾನದಿಯಲ್ಲಿ ವಿಸರ್ಜಿಸಲಾಯಿತು.
ಈ ಸಮಯದಲ್ಲಿ ಸಮಿತಿಯ ಅಧ್ಯಕ್ಷರಾದ ಹೂವಪ್ಪಗೌಡ, ಗೌರವಾದ್ಯಕ್ಷ ಕೃಷ್ಣಪ್ಪಗೌಡ , ಜಾನಪದ ಕಲಾವಿದ ರಂಗಪ್ಪಗೌಡ, ಕೃಷಿಕ ಮಂಜಪ್ಪಗೌಡ ಹಾಗೂ ಸಮಿತಿಯ ಪಧಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





0 Comments