ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ)
ಇತ್ತೀಚೆಗೆ ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಶಾನುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಂದಿನಿ ಸಂತೋಷ್ ಹಾಗೂ ಇತರೆ ಸದಸ್ಯರು ಇಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರ ಸಮ್ಮುಖದಲ್ಲಿ ಮರಳಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಂದಿನಿ ಸಂತೋಷ್, ಸದಸ್ಯರಾದ ಸುಶೀಲ, ಲಕ್ಷ್ಮಣ್ ಮತ್ತು ಸಂತೋಷ್ ಅವರು ಜೆಡಿಎಸ್ ಸೇರ್ಪಡೆಗೊಂಡಿದ್ದರು, ಆದರೆ ಈಗ ಮರಳಿ ಮಾತೃ ಪಕ್ಷ ಬಿಜೆಪಿಗೆ ಹಿಂದಿರುಗಿದ್ದಾರೆ.
ಇಂದು ಕೊಪ್ಪದ ಬಿಜೆಪಿ ಮಂಡಲದ ಕಚೇರಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಮುಖಂಡರಾದ ರಾಮಸ್ವಾಮಿ ಶೆಟ್ಟಿಗದ್ದೆ ಅವರ ಸಮ್ಮುಖದಲ್ಲಿ ಮರಳಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಹೊಸೂರು ದಿನೇಶ್, ಶಾನುವಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರತ್ ಬಿಳುಕೊಪ್ಪ, ಶೃತಿ ರೋಹಿತ್ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಚುನಾವಣಾ ಅಖಾಡಕ್ಕೆ ಮೂರು ಪಕ್ಷಗಳ ಸಿದ್ಧತೆ:
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಅಖಾಡ ರಂಗೇರಿದ್ದು ಮೂರು ಪಕ್ಷಗಳು ನಾ ಮುಂದು ತಾ ಮುಂದು ಎಂಬ ರೀತಿಯಲ್ಲಿ ಪಕ್ಷದ ಚಟುವಟಿಕೆಗಳನ್ನು ಸಕ್ರಿಯವಾಗಿ ಆರಂಭಿಸಿದೆ. ಅತೃಪ್ತರು, ಒಂದು ಪಕ್ಷದಿಂದ ಬೇಸತ್ತವರು, ಅಸಮಾಧಾನ ಹೊಂದಿದವರು ಪಕ್ಷದಿಂದ ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತಿದ್ದು ಮೂರೂ ಪಕ್ಷಗಳು ಮತದಾರನನ್ನು ಸೆಳೆಯುವ ಸಲುವಾಗಿ ಕಸರತ್ತು ಆರಂಭಿಸಿದೆ.





0 Comments