ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಸ್ ಹತ್ತುವ ವೇಳೆ ಅಚಾನಕ್ಕಾಗಿ ಕಾಲೇಜು ಯುವತಿ ಬಿದ್ದ ಪರಿಣಾಮ ಆಕೆಯ ಮೆದುಳು ನಿಷ್ಕ್ರಿಯವಾದ ಪರಿಣಾಮ ಈ ನೋವಿನಲ್ಲೂ ಅವಳ ಅಂಗಾಂಗ ದಾನಕ್ಕೆ ಪೋಷಕರು ಮುಂದಾಗಿ ಈ ಮೂಲಕ ಬೇರೆಯವರ ಬಾಳನ್ನು ಬೆಳಗಲು ಮುಂದಾಗಿರುವ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ. 

ಚಿಕ್ಕಮಗಳೂರಿನ ಬಸವನಹಳ್ಳಿ ಕಾಲೇಜಿನ ವಾಣಿಜ್ಯ ವಿಭಾಗದ 16 ರ ಹರೆಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾಬಾಯಿ ಕಳೆದ ಮೂರು ದಿನದ ಹಿಂದೆ ಚಿಕ್ಕಮಗಳೂರಿನ AIT ವೃತ್ತದ ಬಳಿ KSRTC ಬಸ್ ನಿಂದ ಕೆಳಗಿಳಿಯುವ ವೇಳೆ ಅಚಾನಕ್ಕಾಗಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಯಿತು. 

ಇದನ್ನೂ ಓದಿ: ಶೃಂಗೇರಿ: ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರ ದಾಳಿ, ಮದ್ಯ ವಶಕ್ಕೆ ಪಡೆದ ಪೊಲೀಸರು


ಆದರೆ ಯುವತಿಯ ದೇಹ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದೇ ಇದ್ದ ಪರಿಣಾಮ, ವೈದ್ಯರು ಸೂಕ್ಷ್ಮವಾಗಿ ಗಮನಿಸಿದಾಗ ಆಕೆಯ ಮೆದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರು ಕುಟುಂಬಸ್ಥರಿಗೆ ಖಚಿತಪಡಿಸಿದ್ದಾರೆ.

ಈ ಆಘಾತಕಾರಿ ಸುದ್ದಿತಿಳಿದ ಕುಟುಂಬಸ್ಥರು ಒಂದೆಡೆ ದುಃಖಕ್ಕೀಡಾಗಿದ್ದರೆ, ಇನ್ನೊಂದೆಡೆ ಧೃತಿಗೆಡದೆ ಆಕೆಯ ದೇಹದ ಭಾಗಗಳು ಬೇರೊಬ್ಬರಿಗೆ ಉಪಯುಕ್ತವಾಗಲಿ ಎಂಬ ಉತ್ತಮ ಮನಸ್ಸಿನಿಂದ ಅಂಗಾಂಗದಾನಕ್ಕೆ ಮುಂದಾಗಿದ್ದಾರೆ. 

ಸಂಜೆ ಜಿಲ್ಲೆಗೆ ಆಗಮಿಸಲಿದೆ ನುರಿತ ವೈದ್ಯರ ತಂಡ: 

ಮೂಲತಃ ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡ್ಯದ ಈ ಕುಟುಂಬವು ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದರು. ರಕ್ಷಿತಾಳ ತಾಯಿ ಲಕ್ಷ್ಮೀಬಾಯಿ ತಂದೆ ಸುರೇಶ್ ನಾಯಕ್ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಇಂದು ಸಂಜೆಯ ವೇಳೆಗೆ ಚಿಕ್ಕಮಗಳೂರಿಗೆ ನುರಿತ ವೈದ್ಯರ ತಂಡವು ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಳೆ ಮಧ್ಯಾಹ್ನ 2 ಗಂಟೆಯ ಆಸುಪಾಸಿನಲ್ಲಿ ಹೆಲಿಕಾಪ್ಟರ್ ಮೂಲಕ ಯುವತಿಯ ಅಂಗಗಳು ರವಾನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಜೀವನದ ಸಾರ್ಥಕತೆಯನ್ನು ರಕ್ಷಿತಾ ಮೆರೆದಿದ್ದು ಇಂತಹ ಸ್ಥಿತಿಯನ್ನು ಎದುರಿಸುತ್ತಿರುವ ಪೋಷಕರಿಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

ಕೂಲಿ ಮಾಡಿಕೊಂಡು ಕಷ್ಟಪಟ್ಟು ಜೀವನವನ್ನು ಸಾಗಿಸುತ್ತಾ ಇತ್ತ ಮಗಳನ್ನೂ ಓದಿಸುತ್ತಾ ಆಕೆಯಿಂದ ತಮ್ಮ ಮುಂದಿನ ಜೀವನ ಅತ್ಯಂತ ಸುಖವಾಗಿರುತ್ತದೆ ಎಂಬೆಲ್ಲಾ ಆಶಾಭಾವನೆಗಳನ್ನು ಹೊಂದಿದ್ದ ಪೋಷಕರು ಮಗಳ ಈ ಸ್ಥಿತಿ ಕಂಡು ಮರುಗಿದ್ದಾರೆ. 

ಜಿಲ್ಲಾಡಳಿತದಿಂದ ತಯಾರಿ: 

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಹಂತಕ್ಕೆ ತಯಾರಿ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಇದೊಂದು ಅಪರೂಪದ ಹಾಗೂ ಸಾರ್ಥಕತೆಯ ಕ್ಷಣವಾಗಿ ಇರಲಿದ್ದು ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಹಾಗೂ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಸಭೆನಡೆಸಿ ಅನೇಕ ನಿರ್ಣಯಗಳನ್ನು ಹಾಗೂ ಆಗಬೇಕಿರುವ ಕೆಲಸಗಳ ಕುರಿತು ಹೆಚ್ಚಿನ ಸಿದ್ಧತೆಯನ್ನು ಆರಂಭಿಸಿದೆ.

ಗಣ್ಯರಿಂದ ಪೋಷಕರಿಗೆ ಶ್ಲಾಘನೆ :

ಈ ಕುರಿತು ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿ, ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದು ಸಾವಿನ ಸಾರ್ಥಕತೆಯ ಕುರಿತು ಹಾಗೂ ಮಗಳ ನಂತರವೂ ಅನೇಕರಲ್ಲಿ ಅವಳನ್ನು ಕಾಣುವ ಸಲುವಾಗಿ ಪೋಷಕರು ಧೃತಿಗೆಡದೆ ಕೈಗೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ.