ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಕೊಪ್ಪ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಕಛೇರಿ ಎದುರು ಜಮಾವಣೆಗೊಂಡ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಿಂದಿ ದಿವಸ್ ನ್ನು ವಿರೋಧಿಸಿ ಕನ್ನಡ ಭಾಷೆಗೆ ಸಂಪೂರ್ಣವಾದ ಪ್ರೋತ್ಸಾಹ ಹಾಗೂ ಮನ್ನಣೆ ನೀಡುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ ಸೆ.14 ನ್ನು ರಾಷ್ಟ್ರೀಯ ಹಿಂದಿ ದಿವಸ್ ಆಚರಣೆಯನ್ನಾಗಿ ಆಚರಿಸಲು ಮುಂದಾಗಿದೆ ಇದನ್ನು ತಾಲೂಕು ಜೆಡಿಎಸ್ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಮುಖಂಡರು ತಿಳಿಸಿದರು. 


ಜನರು ಸುಲಭವಾಗಿ ಅರ್ಥೈಸಿಕೊಳ್ಳುವ ಭಾಷೆ ಕನ್ನಡವಾಗಿದ್ದು, ಕರ್ನಾಟಕದಲ್ಲಿ ಆಡಳಿತ ಭಾಷೆಯು ಕನ್ನಡವಾಗಿದೆ. ಇಂತಹ ಉತ್ತಮವಾದ, ಪರಂಪರೆಯಿರುವ ಭಾಷೆಯಾದ ಕನ್ನಡಕ್ಕೆ ಇನ್ನಷ್ಟು ಹೆಚ್ಚಿನ ಮನ್ನಣೆಯನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು. 

ಶೃಂಗೇರಿ ನರಸಿಂಹರಾಜಪುರದಲ್ಲೂ ಮನವಿ ಸಲ್ಲಿಕೆ:

ನರಸಿಂಹರಾಜಪುರ ಹಾಗೂ ಶೃಂಗೇರಿ ಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಿಂದಿ ದಿವಸ್ ವಿರೋಧಿಸಿ ಪ್ರತಿಭಟನೆ ನಡೆಸಿ, ಹಿಂದಿ ದಿವಸ್ ಕೇವಲ ಹಿಂದಿ ಮಾತನಾಡುವ ರಾಜ್ಯಗಳಿಗೆ ಸೀಮಿತವಾಗಲಿ, ನಮಗೆ ಅದರ ಅವಶ್ಯಕತೆಯಿಲ್ಲ. ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಸದಾ ಸರಿಯಾದ ಉತ್ತರವನ್ನೇ ನೀಡಿದ್ದಾರೆ ಈ ಬಲವಂತದ ಹೇರಿಕೆಗೆ ನಮ್ಮ ವಿರೋಧವಿದೆ, ಈ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಹಾಗೂ ಒತ್ತಡ ಹೇರದಂತೆ ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆ ನಿಲ್ಲಿಸಬೇಕೆಂದು ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಿದರು.