ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕೆಲಸ ಮುಗಿಸಿಕೊಂಡು ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಹಿಂದಿರುಗುತ್ತಿದ್ದ ಪತಿಯನ್ನು ಪ್ರಶ್ನಿಸಿದ ಪತ್ನಿ ಭೀಕರವಾಗಿ ಹತ್ಯೆಗೀಡಾಗಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ದಂಪತಿಗಳ ಕಲಹದ ನಡುವೆ ಸಿಲುಕಿರುವ ಇಬ್ಬರು ಮಕ್ಕಳ ಸ್ಥಿತಿ ಶೋಚನೀಯವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮೊಬೈಲ್ ನಲ್ಲಿ ಮಾತನಾಡಿಕೊಂಡು ಬೈಕ್ ಚಾಲನೆ ನಡೆಸುತ್ತಿದ್ದ ಯುವಕನ ದುರ್ಮರಣ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿನ ಬೈಪಾಸ್ ರಸ್ತೆಯ ಪ್ರಿಯಾಂಕಾ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಘಟನಾ ಕುರಿತಾದ ವಿಷಯ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ಮೆಸ್ಕಾಂ ನೌಕರನಾಗಿ ಕೆಲಸ ಮಾಡುತ್ತಿದ್ದ ದಿನೇಶ್ 12 ವರ್ಷಗಳ ಹಿಂದೆ ಇಲ್ಲಿನ ಮತ್ತಿಘಟ್ಟ ಗ್ರಾಮದ ಮಂಜುಳಾ ಅವರನ್ನು ಮದುವೆಯಾಗಿದ್ದ, ಈ ದಂಪತಿಗೆ 10 ವರ್ಷದ ಓರ್ವ ಹೆಣ್ಣು ಮಗಳು ಹಾಗೂ 4 ವರ್ಷದ ಪುಟಾಣಿ ಇನ್ನೋರ್ವ ಹೆಣ್ಣುಮಗಳು ಇದ್ದಾಳೆ.
ದಿನೇಶ್ ಕೆಲಸ ಮುಗಿಸಿಕೊಂಡು ಪ್ರತಿದಿನ ತಡವಾಗಿ ಬರುತ್ತಾರೆ ಎಂಬ ಕಾರಣಕ್ಕೆ ದಂಪತಿಗಳ ನಡುವೆ ಸದಾ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು ಅದೇ ವಿಚಾರವಾಗಿ ಮಂಗಳವಾರ ರಾತ್ರಿ ಕೂಡ ಇಬ್ಬರು ಜಗಳವಾಡಿದ್ದಾರೆ ಎನ್ನಲಾಗಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ ಪರಿಣಾಮ, ದಿನೇಶ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಮಂಜುಳಾ ಅವರ ಕುತ್ತಿಗೆ ಕೊಯ್ದಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿಟ್ಟಿನಿಂದ ಕೊಲೆ ಮಾಡಿ ಹೆದರಿದ ಪತಿ ದಿನೇಶ್ ತಾನೂ ಬ್ಲೇಡ್‌ನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಿನೇಶ್ ಚಾಕುವಿನಿಂದ ಇರಿದಾಗ ಮಂಜುಳಾ ಅರಚಾಡಿದ್ದು, ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಈ ವೇಳೆಗೆ ಘಟನಾ ಸ್ಥಳಕ್ಕೆ ಧಾವಿಸಿದ ತುಂಗಾ ನಗರ ಠಾಣೆಯ ಪೊಲೀಸರು ದಿನೇಶ್‌ನನ್ನು ಶೀಘ್ರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಬಾಚಾವಾಗುವಂತೆ ಮಾಡಿದ್ದಾರೆ.
ಮಂಜುಳಾ ರಕ್ತದ ಮಡುವಿನಲ್ಲಿ ಮಂಜುಳಾ ಶವವಾಗಿ ಬಿದ್ದಿದ್ದಳು ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಪದ ಕೈಗೆ ಬುದ್ಧಿ ನೀಡಿದರ ಪರಿಣಾಮವಾಗಿ ತಾಯಿ ಬಾರದ ಲೋಕಕ್ಕೆ ತೆರಳಿದ್ದರೆ, ತಂದೆ ಆಸ್ಪತ್ರೆಯಲ್ಲಿದ್ದಾರೆ, ಏನೂ ಅರಿಯದ ಇಬ್ಬರು ಮುಗ್ದ ಮಕ್ಕಳ ಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿದೆ.





0 Comments