ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ನಡೆಸುತ್ತಿದ್ದ ಆರೋಪ ಹೊಂದ್ದಿದ ಮಳಿಗೆಗಳ ಮೇಲೆ ದಿಢೀರನೆ ದಾಳಿ ನಡೆಸಿದ ಅಧಿಕಾರಿಗಳು ಮಾರಾಟ ತಡೆ ನೊಟೀಸ್ ನೀಡಿ ಮಾರಾಟಕ್ಕೆ ತಡೆಯೊಡ್ಡಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅವಘಡ; ಸ್ಥಳದಲ್ಲೇ ಮೇಗೂರಿನ ಯುವಕ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ನೂತನ್ ಟ್ರೇಡರ್ಸ್ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮತ್ತು ರಸಗೊಬ್ಬರ ಕೊಂಡುಕೊಂಡ ರೈತರಿಗೆ ಸರಿಯಾದ ಬಿಲ್ಲನ್ನು ನೀಡದೆ ವಂಚನೆ ಮಾಡುತ್ತಿದ್ದಾರೆ ಎಂಬುದಾಗಿ ರೈತರಿಂದ ದೂರು ಕೇಳಿ ಬಂದ ಹಿನ್ನೆಲೆ ತೋರಣಮಾವಿನಲ್ಲಿರುವ ರಸಗೊಬ್ಬರದ ದಾಸ್ತಾನು ಗೋದಾಮಿಗೆ ರಸಗೊಬ್ಬರ ಮಾರಾಟದ ಬಿಲ್ಲುಗಳು ಇನ್ವಾಯ್ಸ್ ಗಳು ಮತ್ತು ದಾಸ್ತಾನು ಪರಿಶೀಲನೆಯನ್ನು ಕೈಗೊಳ್ಳಲು ಜಿಲ್ಲಾ ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕರು ವೆಂಕಟೇಶ ಎಸ್ ಚವ್ಹಾಣ್ ನೇತೃತ್ವದ ತಂಡ ಇಂದು ಮುಂಜಾನೆ ದಾಳಿ ನಡೆಸಿತು.

ದಾಳಿಯ ವೇಳೆಯಲ್ಲಿ ನೂತನ್ ಟ್ರೇಡರ್ಸ್, ಆಲ್ದೂರು ಮಾಲೀಕರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದದ್ದನ್ನು ಪರಿಶೀಲಿಸಲಾಗಿ, ರಸಗೊಬ್ಬರ ಮಾರಾಟಗಾರರಿಗೆ ಕಾರಣ ಕೇಳಿದ ಅಧಿಕಾರಿಗಳು ನೋಟಿಸ್ ನೀಡಿ, ದಾಸ್ತಾನು ಮಾಡಲಾಗಿದ್ದ ರಸಗೊಬ್ಬರಗಳಿಗೆ 21 ದಿನಗಳವರೆಗೆ ಮಾರಾಟ ತಡೆ ನೋಟಿಸನ್ನು ಜಾರಿಗೊಳಿಸಿ, ಮಾರಾಟ ಮಳಿಗೆ ಮತ್ತು ರಸಗೊಬ್ಬರದ ದಾಸ್ತಾನು ಗೋದಾಮನ್ನು ಬಂದ್ ಮಾಡಿಸಿದರು. 

ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿ ರೈತರಿಂದ ಪಡೆದಿರುವ ಹೆಚ್ಚಿನ ಹಣವನ್ನು ಹಿಂತಿರುಗಿಸಿ ಸೂಕ್ತ ದಾಖಲೆಗಳನ್ನು ನೀಡದೇ ಇದ್ದಲ್ಲಿ, ರಸಗೊಬ್ಬರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 


ಇಂತಹ ಯಾವುದೇ ಪ್ರಕರಣಗಳು, ಯಾವ ರೀತಿಯಲ್ಲಾದರೂ ರೈತರ ಮೇಲೆ ಧೋರಣೆ ಅಥವಾ ಅತಿಯಾದ ಬೆಲೆಯನ್ನು ತೆಗೆದುಕೊಳ್ಳುವುದು, ಮುಂತಾದವು ನಡೆದಲ್ಲಿ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಾಗೃತದಳದ ಅಧಿಕಾರಿಗಳು ತಿಳಿಸಿದರು. 

ದಾಳಿಯ ವೇಳೆ ಜಾಗೃತದಳದ ತಂಡದಲ್ಲಿ ವೆಂಕಟೇಶ ಎಸ್ ಚವ್ಹಾಣ್, ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ)‍, ಇಂದ್ರಕುಮಾರ್, ಕೃಷಿ ಅಧಿಕಾರಿ, ಆಲ್ದೂರು ರೈತ ಸಂಪರ್ಕ ಕೇಂದ್ರ ಇದ್ದರು.