ರಾಜ್ಯದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಿರಂತರವಾಗಿ ಸಂಭವಿಸುತ್ತಿರುವ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ಸೆ.7 ರಿಂದ ಸೆ. 9 ರವರೆಗೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದ ಬೆಳೆನಷ್ಟ ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಯಪುರ, ಕೊಗ್ರೆ ಸಂಪರ್ಕಿಸುವ ರಸ್ತೆಯಲ್ಲಿ ಮೂಡಿದ ಬಿರುಕು; ಪರ್ಯಾಯ ಮಾರ್ಗವೂ ಬಂದ್ ಆಗುವ ಭೀತಿ
ಕೇಂದ್ರ ಗೃಹ ಇಲಾಖೆ ಜಂಟಿಕಾರ್ಯದರ್ಶಿ ಆಶಿಶ್ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ಅವರು ಇನ್ನೆರಡು ತಂಡಗಳಲ್ಲಿ ಇರಲಿದ್ದಾರೆ.
ಆಶಿಶ್ ಕುಮಾರ್ ನೇತೃತ್ವದ ತಂಡ ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಹಾಗೂ ಅಶೋಕ್ ಕುಮಾರ್ ತಂಡ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಮತ್ತು ಕೆ.ಮನೋಹರನ್ ಅವರ ತಂಡ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿವೆ ಎಂಬುದರ ಕುರಿತಾಗಿ ತಿಳಿಸಿದರು.

%20-%20Copy.jpeg)



0 Comments