ಮಲೆನಾಡಿನ ಭಾಗದಲ್ಲಿ ಈ ವರ್ಷ ಸಹ ಅತಿವೃಷ್ಟಿಯಿಂದಾದ ಅನಾಹುತ ಅಷ್ಟಿಷ್ಟಲ್ಲ, ಮನೆ, ತೋಟ, ಗದ್ದೆ, ರಸ್ತೆ, ಸೇತುವೆ ಸೇರಿದಂತೆ ಎಲ್ಲವೂ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ.

ಮನೆ ಕಳೆದುಕೊಂಡ ಬಡವರು ಕೆಲವು ದಿನಗಳ ಕಾಲ ಸರ್ಕಾರಿ ಶಾಲೆಗಳಲ್ಲಿ, ಸಮುದಾಯ ಭವನಗಳಲ್ಲಿ ವಾಸವಿದ್ದು ಈಗ ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಇನ್ನೂ ಕೆಲವರು ಅನಿವಾರ್ಯವಾಗಿ ತಾತ್ಕಾಲಿಕ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ವಾಸವಿದ್ದಾರೆ.

ಇದನ್ನೂ ಓದಿ: ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಭವಿಸಿದ ಹಾನಿಯ ಮೊತ್ತ 398 ಕೋಟಿ: ಜಿಲ್ಲಾಧಿಕಾರಿ ಕೆ.ಎನ್ ರಮೇಶ್

ಇದ್ದ ಒಂದು ಮನೆಯನ್ನೂ ಕಳೆದುಕೊಂಡವರು ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವಾಗ ಸರ್ಕಾರದ ಕೆಲವು ಅಸಂಬದ್ಧ ನಿಯಮಗಳ ಕಾರಣದಿಂದ ಪೂರ್ಣ ಪ್ರಮಾಣದ ಪರಿಹಾರ ಸಿಗದೇ ಸಮಸ್ಯೆಗೆ ಸಿಲುಕಿದ್ದಾರೆ ಶೃಂಗೇರಿಯ ನೆಮ್ಮಾರಿನ ಮಲ್ನಾಡ್ ಗ್ರಾಮದ ಸುಶೀಲ ಮಂಜುನಾಥ್ ಹಾಗೂ ಹರೂರು ಗ್ರಾಮದ ವನಜಾ ರಾಮೇಗೌಡ ಎಂಬುವರ ಕುಟುಂಬ. 

ಅರ್ಜಿ ನೀಡಿದರೂ ಹಕ್ಕುಪತ್ರ ನೀಡದೇ, ಈಗ ಪರಿಹಾರಕ್ಕೆ ಕೊಕ್ಕೆ: 

ಮಲೆನಾಡಿನ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಜಯಪುರ, ಮೂಡಿಗೆರೆ, ಕಳಸ ಭಾಗಗಳು ಸೇರಿದಂತೆ ಹಲವೆಡೆ ಕಳೆದ 20 ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರಿಗೆ ಹಕ್ಕುಪತ್ರ ನೀಡಲಾಗಿಲ್ಲ. ಸರ್ಕಾರವೇ ಹಕ್ಕುಪತ್ರ ನೀಡಬೇಕಾಗಿರುವುದು, ಆದರೆ ಅರ್ಜಿ ಸಲ್ಲಿಸಿದ್ದವರಿಗೆ ಹಕ್ಕುಪತ್ರ ನೀಡದೇ ಈಗ ಹಕ್ಕುಪತ್ರ ಇಲ್ಲದವರಿಗೆ ಪೂರ್ತಿ ಪರಿಹಾರ ನೀಡದೆ ಕೇವಲ ಒಂದು ಲಕ್ಷ ಮಾತ್ರ ನೀಡುತ್ತೇವೆ ಎಂಬುತ್ತಿರುವುದು ಅಸಂಬದ್ಧ, ಅಮಾನವೀಯ ನಿಯಮವಾಗಿದೆ.

ಕೇವಲ ಒಂದು ಲಕ್ಷ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಹೇಗೆ ಸಾಧ್ಯವಿದೆ ಎಂಬುದು ಬಡಬಗ್ಗರ ಪ್ರಶ್ನೆಯಾಗಿದೆ. ಶೃಂಗೇರಿಯ ಮಲ್ನಾಡ್ ಗ್ರಾಮದ ಸುಶೀಲ ಮಂಜುನಾಥ್ ಕುಟುಂಬ ಹಲವು ವರ್ಷಗಳ ಹಿಂದೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದೆ , ಆದರೆ ಹಕ್ಕುಪತ್ರ ಮಾತ್ರ ದೊರಕಿಲ್ಲ. ಈಗ ಅತಿವೃಷ್ಟಿಯಿಂದ ಸಂಪೂರ್ಣ ಮನೆ ನಾಶವಾಗಿದ್ದು ಪರಿಹಾರಕ್ಕಾಗಿ ಪರದಾಡುವಂತಾಗಿದೆ.

ಸರ್ಕಾರದ ಯೋಜನೆ ಅಡಿಯಲ್ಲಿ ಮನೆ ಪಡೆದವರಿಗೂ ಇಲ್ಲ ಪೂರ್ಣಪರಿಹಾರ : 

ಶೃಂಗೇರಿಯ ನೆಮ್ಮಾರಿನ ಹರೂರು ಗ್ರಾಮದ ವನಜಾ ರಾಮೇಗೌಡ ಎಂಬುವವರು ಈ ಹಿಂದೆ ಸರ್ಕಾರದ ಬಸವ ಯೋಜನೆ ಅಡಿಯಲ್ಲಿ ಮನೆ ಪಡೆದವರಾಗಿದ್ದಾರೆ ಆದರೆ ಅತಿಯಾದ ಮಳೆಗೆ ಕಳೆದ ಕೆಲ ದಿನಗಳ ಹಿಂದೆ ಮನೆ ಕುಸಿದು ಬಿದ್ದಿದ್ದು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಕ್ಕುಪತ್ರ ಇಲ್ಲದ ಕಾರಣ ಪೂರ್ಣ ಪ್ರಮಾಣದ ಪರಿಹಾರ ಸಾಧ್ಯವಿಲ್ಲ, ಒಂದು ಲಕ್ಷ ಮಾತ್ರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮನೆ ಕಳೆದುಕೊಂಡ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.


ಬಿದ್ದಲ್ಲೇ ಕಟ್ಟಲು ಅದೇನು ಸೇತುವೆಯೇ?:

ಇನ್ನೂ ಹಾಸ್ಯಾಸ್ಪದ ಎಂದರೆ ಮನೆ ಕುಸಿದುಬಿದ್ದ ಜಾಗದಲ್ಲೇ ಹೊಸ ಮನೆ ನಿರ್ಮಿಸಬೇಕು ಎಂಬ ನಿಯಮ ಸರ್ಕಾರದಿಂದ ಜಾರಿಗೆ ತರಲಾಗಿದೆ. ಹೆಚ್ಚಿನ ಮನೆಗಳು ಧರೆ ಕುಸಿದು ಬಿದ್ದಿದ್ದರೆ ಇನ್ನೂ ಕೆಲವು ಭೂಕುಸಿತದ ಕಾರಣದಿಂದ ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿವೆ, ಹಾಗಿರುವಾಗ ಅಲ್ಲೇ ಪುನಃ ಮನೆ ಕಟ್ಟಿದಲ್ಲಿ ಮತ್ತೆ ಅಪಾಯ ಎಳೆದುಕೊಂಡಂತೆ. ಈ ಹಿಂದಿನ ವರ್ಷಗಳಲ್ಲಿ ಅಕ್ರಮವಾಗಿ ಪರಿಹಾರ ಪಡೆದು ಸರ್ಕಾರಕ್ಕೆ ಕೆಲವರು ಮೋಸ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿದೆ. ಆದರೆ ನಿಜಕ್ಕೂ ಮೋಸ ಮಾಡಿದವರ ಕುರಿತು ತನಿಖೆ ನಡೆದು ಅವರಿಗೆ ಶಿಕ್ಷೆ ಆಗಬೇಕು. ಅದು ಬಿಟ್ಟು ಬಡಬಗ್ಗರಿಗೆ ಅನ್ಯಾಯ ಮಾಡಬಾರದು ಎಂಬ ಅಭಿಪ್ರಾಯವನ್ನು ಮನೆ ಕಳೆದುಕೊಂಡವರು ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಅಧಿಕಾರಿಗಳು ಈ ಸಮಸ್ಯೆ ಕುರಿತು ಪರಾಮರ್ಶಿಸಿ ಕುಟುಂಬಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕಿದೆ, ಹಾಗೆಯೇ ಸ್ಥಳೀಯ ಶಾಸಕರು, ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸರ್ಕಾರದ ಹಂತದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ.