ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅನುಮಾನಾಸ್ಪದ ರೀತಿಯಲ್ಲಿ ಹಸುವಿನ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಎರಡು ಹಸುಗಳು ಸಜೀವವಾಗಿ ಸಾವನ್ನಪ್ಪಿರುವ ದುರ್ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಗಡಿರಂಗಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಮೂರ್ತಿ ಎಂಬುವವರಿಗೆ ಸೇರಿದ ಹಸುವಿನ ಕೊಟ್ಟಿಗೆ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ನವರಾತ್ರಿಯ ಮೂರನೇ ದಿನ ವೃಷಭವಾಹಿನಿಯಾಗಿ ವಿರಾಜಮಾನಳಾದ ಶೃಂಗೇರಿ ಶಾರದೆ

ಈ ಅವಘಡದ ವೇಳೆ ಒಟ್ಟು ನಾಲ್ಕು ಹಸುಗಳು ಕೊಟ್ಟಿಗೆಯಲ್ಲಿದ್ದು ಎರಡು ಹಸುಗಳು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದರೆ, ಇನ್ನೆರಡು ಹಸುಗಳು ಸಜೀವವಾಗಿ ದಹನಗೊಂಡಿದೆ. ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. 

ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದ್ದು, ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ ಸಹ ವ್ಯಕ್ತವಾಗಿದೆ. ಹಸು ಹಾಗೂ ಕೊಟ್ಟಿಗೆಯನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ವಾರಸುದಾರರು ಘಟನಾ ಸಂಬಂಧ ಬೇಸರ ವ್ಯಕ್ತಪಡಿಸಿದ್ದು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.


ಅಡಿಕೆಗೆ ಬಾಧಿಸಿರುವ ರೋಗಗಳ ನಿಯಂತ್ರಣದ ಕುರಿತು ಕ್ರಮಕೈಗೊಳ್ಳದೇ ಹೋದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು: ಬೇಳೂರು ಗೋಪಾಲಕೃಷ್ಣ

ಮಲೆನಾಡಿನ ರೈತರ ಜೀವನಾಡಿ ಆಗಿರುವ ಅಡಿಕೆ ಬೆಳೆಗೆ ವಿವಿಧ ಮಾರಕ ರೋಗಗಳು ಬಾಧಿಸುತ್ತಿದೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ಇರುವುದು ದುರದೃಷ್ಟಕರ ಈ ಕುರಿತು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಪರಿಹಾರ ಒದಗಿಸದೇ ಇದ್ದಲ್ಲಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕಿಡಿಕಾರಿದ್ದಾರೆ. 

ಅಡಿಕೆ ಬೆಳೆಯು ಹಳದಿ ಎಲೆರೋಗ, ಎಲೆ ಚುಕ್ಕಿ ರೋಗ, ಮುಂತಾದ ರೋಗಗಳಿಗೆ ತುತ್ತಾಗಿ ಅಳಿವಿನ ಅಂಚಿನಲ್ಲಿದೆ. ಜಿಲ್ಲೆಯ ಕರೂರು ಹೋಬಳಿ ಬಾರಂಗಿ, ತುಂಬಿ, ಬ್ಯಾಕೊಡು, ನೆಲ್ಲಿಬೀಡು, ಹಾಬಿಗೆ, ನಿಟ್ಟೂರು, ಸಾಗರ ತಾಲೂಕಿನ ಮುಳುಗಡೆ ಪ್ರದೇಶದ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ ಬಿಳಿ ಚಿಕ್ಕಿ, ರೋಗ ಅಥವಾ ಹಿಡಿಕುಂಟೆ ರೋಗ ಬಂದು ತೋಟವೇ ಸರ್ವನಾಶ ಆಗುತ್ತಿದೆ ಇದರಿಂದಾಗಿ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು ಅಧಿಕಾರಿಗಳು ರೈತರ ಗೋಳನ್ನು ಕೇಳದೇ ಇರುವುದು ಅತ್ಯಂತ ದುರಾದೃಷ್ಟಕರ. ಪರಿಹಾರ ಕ್ರಮ ರೋಗದ ನಿಯಂತ್ರಣದ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು, ನೊಂದ ರೈತರಿಗೆ ಸಾಂತ್ವಾನ ಹೇಳಿದರು. 


ಕೃಷಿಯನ್ನು ನಂಬಿ ಜೀವನಕಟ್ಟಿಕೊಂಡಂತಹ ಮಲೆನಾಡ ರೈತರ ಈ ಗೋಳನ್ನು ಕೇಳಲು ಇಲ್ಲಿವರೆಗೂ ಇಲ್ಲಿನ ಶಾಸಕರು ಅಧಿಕಾರಿಗಳು ಯಾರು ಪತ್ತೆ ಇಲ್ಲ, ತಕ್ಷಣ ಈ ಸಮಸ್ಯೆಗೆ ಸರ್ಕಾರ ಮತ್ತು ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ ಇದರ ಬಗ್ಗೆ ಗಮನ ಹರಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ಕ್ರಮಕ್ಕೆ ಮುಂದಾಗದೆ ಹೋದಲ್ಲಿ ಈ ಕುರಿತಾಗಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಅವರು ಎಚ್ಚರಿಸಿದರು.