ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಜನರಿಗೆ ಅಗತ್ಯವಿರುವ ಸುಸಜ್ಜಿತ ಆಸ್ಪತ್ರೆ ಹಾಗೂ ಮೂಲಭೂತ ಸೌಕರ್ಯವಾದ ರಸ್ತೆ ವ್ಯವಸ್ಥೆಯನ್ನೇ ಕಲ್ಪಿಸದೇ ಬಡವರ್ಗದ ಜನರು ದೂರದ ಊರುಗಳ ಆಸ್ಪತ್ರೆಗಳಿಗೆ ತೆರಳಲಾರದೆ ಇನ್ನೂ ಮನೆಯಲ್ಲೇ ಹಾಸಿಗೆ ಹಿಡಿದಿರುವುದು ಶೃಂಗೇರಿ ಕ್ಷೇತ್ರದ ಜನರ ದುರಾದೃಷ್ಟ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ವಿನಯ್ ಗುರೂಜಿ ಪಾದಪೂಜೆ ಮಾಡಿದ ನಯನ ಮೋಟಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ '

ಈ ಕುರಿತಾಗಿ ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು ಕೃಷಿಯನ್ನು ಮೂಲಧಾರವಾಗಿಟ್ಟುಕೊಂಡು ಜೀವನ ಸಾಗಿಸುತ್ತಿರುವ ಮಲೆನಾಡಿನ ಕೃಷಿಕರಿಗೆ ಮಳೆಯಿಂದ ಉಂಟಾದ ಹಾನಿಪರಿಹಾರದಲ್ಲಿ ಕಾಫಿ ಬೆಳೆಯನ್ನು ಸೇರಿಸದೇ ಇರುವುದು ಈ ಸಲುವಾಗಿ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಧ್ವನಿಯೆತ್ತದೆ ಸುಮ್ಮನಿರುವುದು ವಿಪರ್ಯಾಸ ಎಂದರು.


ವಿರೋಧ ಪಕ್ಷಗಳ ತೇಜೋವಧೆ ನಿಲ್ಲಿಸಿ: 

ಸುಖಾಸುಮ್ಮನೆ ಯಾರದೋ ತೇಜೋವಧೆ ಮಾಡದೆ ತಾವು ನಡೆಸಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು, ಯಾವುದೋ ವಂಚನೆ ಪ್ರಕರಣದಲ್ಲಿ ಯಾರದ್ದೋ ಹೆಸರು ಬಂದರೆ ಹೆಸರು ಒಂದೇ ಎಂಬುದನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡುವ ಎರಡೂ ಪಕ್ಷಗಳ ಬೆಂಬಲಿಗರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಅಭಿವೃದ್ಧಿಯ ಕುರಿತು ಚಿಂತಿಸಿ, ಚರ್ಚಿಸಿ ಸಮಾಜವನ್ನು, ಈ ಭಾಗದ ಜನರನ್ನು ಮುನ್ನಡೆಸುವ ಕೆಲಸವನ್ನು ಮಾಡುವ ಸಲುವಾಗಿ ರಾಜಕೀಯ ನಾಯಕರುಗಳು ಮುಂದಾಗಬೇಕು ಎಂದರು. 

ಈ ಭಾರೀ ಸಂಭವಿಸಿದ ಮಳೆಯಿಂದಾಗಿ ಕ್ಷೇತ್ರದ ಅನೇಕ ಕೃಷಿಕರ ತೋಟಗಳು ಕೊಚ್ಚಿ ಹೋಗಿದೆ, ಬೆಳೆ ನಾಶವಾಗಿದೆ ಇನ್ನೂ ಅನೇಕ ಗ್ರಾಮೀಣಭಾಗಗಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ, ಇಂತಹ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ಜನಪ್ರತಿನಿಧಿಗಳ ಅವಶ್ಯಕತೆ ಈ ಕ್ಷೇತ್ರಕ್ಕಿದೆ, ಮತದಾರರು ಪ್ರಬುದ್ಧರಿದ್ದಾರೆ ಅರ್ಹರನ್ನೇ ಆಯ್ಕೆ ಮಾಡುತ್ತಾರೆ ಎಂದರು. 

ಅನೇಕ ಸಮಯಗಳಿಂದ ಹಳದಿಎಲೆ, ಎಲೆ ಚುಕ್ಕಿಯಂತಹ ರೋಗಗಳು ಬಾಧಿಸುತ್ತಿದ್ದು ಈ ಮಾರಕ ರೋಗಗಳಿಗೆ ಔಷಧಿಯನ್ನು ಕಂಡು ಹಿಡಿದು ರೈತರಿಗೆ ಬೆಂಬಲವಾಗಿ ನಿಲ್ಲುವಲ್ಲಿ ಪ್ರಯೋಗಾಲಯಗಳು ಕುಂದಿದ್ದು, ಇಲ್ಲಿರುವ ಪ್ರಯೋಗಾಲಯಗಳ ಸಬಲೀಕರಣಕ್ಕಾಗಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿ ಈ ರೋಗಗಳ ನಿಯಂತ್ರಣ ಹಾಗೂ ಪರಿಹಾರ ಕ್ರಮಕ್ಕೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರ ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಜಾರಿಗೊಳಿಸದೇಯಿದ್ದಲ್ಲಿ ಮಲೆನಾಡು ಸಂಪೂರ್ಣವಾಗಿ ಬರಡು ಭೂಮಿಯಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಅವರೊಂದಿಗೆ ಕ್ಷೇತ್ರಾಧ್ಯಕ್ಷರಾದ ದಿವಾಕರ್ ಭಟ್ ಸೇರಿದಂತೆ ಜೆಡಿಎಸ್ ನ ಪದಾಧಿಕಾರಿಗಳು ಇದ್ದರು.