ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಐವರಿದ್ದ ಕಳ್ಳರ ತಂಡ ಶ್ರೀಗಂಧ ಮರವನ್ನು ಕಡಿದು ತುಂಡುಗಳ ಸಾಗಾಟದಲ್ಲಿ ತೊಡಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಮರದ ದಿಮ್ಮಿಗಳ ಸಮೇತ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಮತ್ತೆ ಕೇಳಿ ಬಂದ ಲವ್ ಜಿಹಾದ್ ಆರೋಪ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣೀಬೀಡು ಹೋಬಳಿಯ ಹೆಗ್ಗರವಳ್ಳಿಯಲ್ಲಿ ಐದು ಜನ ಮರಗಳ್ಳರ ತಂಡ ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ವೇಳೆ ಗೋಣಿಬೀಡು ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿದ್ದು ಐವರನ್ನೂ ಸಹ ಕಾರ್ಯಾಚರಣೆಯ ಮೂಲಕ ಅಧಿಕಾರಿಗಳು ಬಂಧಿಸಿದ್ದಾರೆ.
ಹೆಗ್ಗರವಳ್ಳಿ ಗ್ರಾಮದಲ್ಲಿ ಬುಧವಾರ ಮೂಡಿಗೆರೆ ಸಮೀಪದ ಬಿಳಗುಳ ಗ್ರಾಮದ ಕೃಷ್ಣ, ಕಾರ್ತಿಕ್, ಹರೀಶ್, ಸ್ವಾಮಿ, ಅಗ್ನಿ ಎಂಬ ಐವರು, ಮರಗಳನ್ನು ಕಡಿದು ಸಾಗಿಸುತ್ತಿದ್ದ ವಿಷಯವನ್ನು ತಿಳಿದ ಹೆಗ್ಗರವಳ್ಳಿ ಗ್ರಾಮಸ್ಥರು ತಕ್ಷಣವೇ ಗೋಣೀಬೀಡು ಉಪವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ಇಲಾಖೆಯ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಅಂದಾಜು 5 ಲಕ್ಷ ರೂ ಬೆಲೆಬಾಳುವ 54 ಕೆಜಿ ತೂಕದ ಗಂಧದಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ನಂದನ್‌ಕುಮಾರ್, ಸಿಬ್ಬಂದಿಗಳಾದ ಪರಮೇಶ್, ಮುಳ್ಳಯ್ಯ, ವಾಹನ ಚಾಲಕ ಸುಮಂತ್, ಭವಿತ್, ಸುಧೀರ್ ಇದ್ದರು.





0 Comments