ಹಾಸನ: (ನ್ಯೂಸ್ ಮಲ್ನಾಡ್ ವರದಿ) ಕೇಳಿದಾಗ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕೂಲಿಗೆ ಹೋಗುತ್ತಿದ್ದ ಪತ್ನಿಯನ್ನು ಮಾರಕಾಸ್ತ್ರಗಳಿಂದ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಇದನ್ನೂ ಓದಿ: ಮೂಡಿಗೆರೆ:ಆನೆ ದಾಳಿಯಿಂದ ಬೆಳೆರಕ್ಷಿಸಿ ಜೀವ ಉಳಿಸುವಂತೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಸಜ್ಜಾದ ರೈತರು
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ಇಂದ್ರಮ್ಮ (48) ಪಾಪಿ ಪತಿಯಿಂದ ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ತೋಟದ ಕೆಲಸಕ್ಕೆ ಹೋಗುತ್ತಿದ್ದ ಈಕೆಯನ್ನು ಹಣದ ವಿಚಾರವಾಗಿ ಬೆಳ್ಳಂಬೆಳಗ್ಗೆ ಕುಡುಕ ಪತಿ ಚಂದ್ರಯ್ಯ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ರಕ್ಷಣೆ ಮಾಡಲು ಹೋದವರ ಮೇಲೂ ಹಲ್ಲೆ :
ತೋಟದ ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯ ಮೇಲೆ ಏಕಾಏಕಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪತಿಯನ್ನು ನಿಯಂತ್ರಿಸುವ ಸಲುವಾಗಿ ಹೋದ ಮಹಿಳೆ ಮೇಲೂ ಹಲ್ಲೆ ನಡೆಸಿದ ಚಂದ್ರೇಗೌಡ ಅಲಿಯಾಸ್ ಚಂದ್ರಯ್ಯ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಪ್ರತಿದಿನ ಕೆಲಸಕ್ಕೆ ತೆರಳುವ ಮಹಿಳೆ ಇಂದ್ರಮ್ಮ ಇಂದೂ ಕೂಡ ನಾಲ್ಕು ಮಂದಿ ಇತರೆ ಮಹಿಳೆಯರೊಂದಿಗೆ ಕೇಶವ ಮೂರ್ತಿ ಎಂಬುವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ದಾರಿಯಲ್ಲಿ ಹೊಂಚು ಹಾಕಿ ಕಾದಿದ್ದ ಚಂದ್ರಯ್ಯ, ಪತ್ನಿ ಹಾಗೂ ಇತರ ಮಹಿಳೆಯರು ಮುಂದೆ ಹೋಗುತ್ತಿದ್ದಂತೆಯೇ ಹಿಂದಿನಿಂದ ಹೋಗಿ ಮನಸೋ ಇಚ್ಛೆ ಪತ್ನಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ತೀವ್ರವಾಗಿ ಕೊಚ್ಚಿ ಆಕೆಯನ್ನು ಕೊಂದಿದ್ದಾನೆ. ಆಲ್ಲದೇ ಈ ವೇಳೆ ಇಂದ್ರಮ್ಮನನ್ನು ರಕ್ಷಿಸಲು ಬಂದ ಓರ್ವ ಮಹಿಳೆ ಮೇಲೂ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆಯೂ ಪತ್ನಿಯ ಹತ್ಯೆಗೆ ಯತ್ನಿಸಿದ್ದ :
ಸದಾ ಮದ್ಯದ ನಶೆಯಲ್ಲಿರುತ್ತಿದ್ದ ಚಂದ್ರಯ್ಯ ಹಣಕ್ಕಾಗಿ ಪದೇ ಪದೇ ಪತ್ನಿಯನ್ನು ಪೀಡಿಸುತ್ತಿದ್ದ. ಕುಡಿಯುವುದಕ್ಕಾಗಿಯೇ ಚೀಕನಹಳ್ಳಿ ಸಹಕಾರ ಸಂಘದಲ್ಲಿ ಮನೆಯವರಿಗೆ ತಿಳಿಯದ ಹಾಗೆ ಸಾಲ ಪಡೆದಿದ್ದ ಎನ್ನಲಾಗಿದ್ದು ಇದರ ಜೊತೆಗೆ ಅನೇಕರ ಬಳಿ ಕೈ ಸಾಲವೂ ಪಡೆದಿದ್ದ ಎನ್ನಲಾಗಿದೆ.ಈ ಮಧ್ಯೆ ಹಣದ ಕೊರತೆ ಎದುರಾದಾಗಲೆಲ್ಲಾ ಹಣ ಕೊಡುವಂತೆ ಪತ್ನಿಯನ್ನು ಸತಾಯಿಸುತ್ತಿದ್ದ. ಆಕೆ ನಿರಾಕರಿಸಿದಾಗ ಕುಡಿದು ಬಂದು ಜಗಳ ಕಾಯುತ್ತಿದ್ದ. ಇದೇ ಕಾರಣಕ್ಕೆ ಆರು ತಿಂಗಳ ಹಿಂದೆ ಮನೆ ಹಿಂದಿನ ಕೊಟ್ಟಿಗೆಯಲ್ಲಿ ಇಂದ್ರಮ್ಮಳನ್ನು ನೇಣುಹಾಕಿ ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದ್ದು ಇತ್ತೀಚೆಗೂ ಮಚ್ಚಿನಿಂದ ಕಡಿಯಲು ಹೋಗಿದ್ದ ಎಂಬ ಆರೋಪಗಳು ಕೇಳಿ ಬಂದಿದೆ.
ಕೆಲ ತಿಂಗಳ ಹಿಂದೆ ಬೆನ್ನು ನೋವು ಎಂದು ಹಾಸಿಗೆ ಹಿಡಿದಿದ್ದ ಚಂದ್ರಯ್ಯನನ್ನು ಪತ್ನಿ ಹಾಗೂ ಚೀಕನಹಳ್ಳಿ ಗ್ರಾಪಂ ಸದಸ್ಯನಾಗಿರುವ ಮಗ ಪ್ರದೀಪ್ ಸೇರಿ ಲಕ್ಷಾಂತರ ರೂ. ಖರ್ಚು ಮಾಡಿ ಗುಣಪಡಿಸಿದ್ದರು. ಹೀಗಿದ್ದರೂ ಪತ್ನಿಯನ್ನು ಯಾರದೇ ಭಯವಿಲ್ಲದೆ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಅರೇಹಳ್ಳಿ ಪಿಎಸ್‌ಐ ಸುರೇಶ್, ಬೇಲೂರು ಸಿಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮದ್ಯದ ನಶೆಯಲ್ಲಿ ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮೃತ ಇಂದ್ರಮ್ಮ ಅವರ ಪುತ್ರ ಆರೋಪಿಗೆ ಕಾನೂನಿನ ಅಡಿಯಲ್ಲಿ ತೀವ್ರ ತರಹದ ಶಿಕ್ಷೆಗೆ ಗುರಿಪಡಿಸಬೇಕೆಂದು ಅಧಿಕಾರಿಗಳನ್ನು ಕೋರಿದ್ದಾರೆ.

%20-%20Copy.jpeg)



0 Comments