ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆಗಳ ಮೇಲೆ ನಿನ್ನೆ ಪೊಲೀಸರು ದಾಳಿ ನಡೆಸಿದ್ದು ದಾಳಿಯ ವೇಳೆ ಅಪಾರ ಪ್ರಮಾಣದ ಹಣ, ವಾಹನಗಳು ಹಾಗೂ ಮೊಬೈಲ್ ಫೋನನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಲಗಾಮ್ ಹಾಕುವ ಕೆಲಸವನ್ನು ಪೊಲೀಸರು ನಡೆಸಿದ್ದಾರೆ. 

ಚಿಕ್ಕಮಗಳೂರು ನಗರದಲ್ಲಿ ದಾಳಿ, 9 ಜನರು ವಶಕ್ಕೆ :

ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ನಗರದ ಮಧುವನ ಲೇಔಟ್ ಪಾರ್ಕ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 09 ಜನರನ್ನು ಪೊಲೀಸರು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ. 

ಜೂಜಾಟ ಆಡುತ್ತಿದ್ದ 9 ಜನರನ್ನು ರಾಹಿಲ್, ಹಸೈನ್ ಖಾನ್, ನೂರುಲ್ಲಾ, ಸಲ್ಮಾನ್, ಅನ್ಸರ್, ಇರ್ಫಾನ್, ಅಭಿಜಿತ್, ಗಜನ್ ಷರೀಫ್ ಮತ್ತು ಮಹಮದ್ ಜಾಫರ್ ಎಂದು ಗುರುತಿಸಲಾಗಿದ್ದು ಆರೋಪಿಗಳು ಜೂಜಾಟಕ್ಕೆ ಬಳಸಿದ್ದ 18,790 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ.




 ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗೀ ಹೋಂ ಸ್ಟೇ ಒಂದರಲ್ಲಿ ಬರ್ತಡೇ ಸೆಲೆಬ್ರೇಷನ್ ಮಾಡಲು ಎಂದು ಬಾಡಿಗೆ ಪಡೆದು ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ನಗದನ್ನು ಆರೋಪಿಗಳ ಸಹಿತ ನಿನ್ನೆ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ ಯಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿ 35 ಜನರನ್ನು ವಶಕ್ಕೆ ಪಡೆದಿದ್ದು, 5.54 ಲಕ್ಷ ನಗದು, 4 ಕಾರು ಹಾಗೂ 39 ಮೊಬೈಲ್ ಫೋನ್ ಸಹಿತ ಆರೋಪಿಗಳನ್ನು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯು ಕೊಪ್ಪ ಉಪವಿಭಾಗದ ಎ.ಎಸ್.ಪಿ ಗುಂಜನ್ ಆರ್ಯ, ಐ.ಪಿ.ಎಸ್. ರವರ ನೇತೃತ್ವದದ ತಂಡ ನಡೆಸಿದ್ದು ಈ ದಾಳಿಯಲ್ಲಿ ಪಿ.ಐ. ಶೃಂಗೇರಿ ಮುತ್ತುರಾಜ್, ಜಯಪುರ ಪಿ.ಎಸ್.ಐ. ಜ್ಯೋತಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಮೂರ್ತಪ್ಪ, ಪ್ರಸನ್ನ ಕುಮಾರ್, ಕಾಂತರಾಜು, ಪ್ರವೀಣ, ಆನಂದ ಬಿರಾದಾರ ರವರು ಇದ್ದರು.