ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಸಂಭವಿಸಿದ ಭಾರಿ ಮಳೆಗೆ ಧರೆ ಕುಸಿತ ಉಂಟಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಮಳೆಹಾನಿ ಹಾಗೂ ಪರಿಹಾರದ ಕುರಿತು ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ

ಹಿರೇಬೈಲ್ - ಕೊಟ್ಟಿಗೆಹಾರ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹಿರೇಬೈಲ್ ಬಳಿ ಧರೆ ರಸ್ತೆಯ ಮೇಲೆ ಕುಸಿದಿದ್ದು ಇದರಿಂದಾಗಿ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ತೀವ್ರ ಸಮಸ್ಯೆಗಳು ಎದುರಾಗಿತ್ತು. 


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕೂಡಲೇ ತೆರವು ಕಾರ್ಯಾಚರಣೆಯನ್ನು ನಡೆಸಿ ರಸ್ತೆ ಸಂಚಾರಕ್ಕೆ ಅನುಕೂಲತೆಗಳನ್ನು ಸೃಷ್ಟಿಸಿದರು. ಕಳೆದೆರಡು ತಿಂಗಳುಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯು ಒಂದಿಲ್ಲೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದು ಸಾರ್ವಜನಿಕರ ಹಾಗೂ ಕೃಷಿಕರ ಪರಿಸ್ಥಿತಿ ಹೇಳತೀರದಾಗಿದೆ.

ಈ ಬಾರಿಯ ಮಳೆಯಿಂದಾಗಿ ಹಲವೆಡೆ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದರೆ, ಅನೇಕರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.