ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳಸದ ಕಳಸೇಶ್ವರ ಸ್ವಾಮಿ ದೇವಾಲಯದ ಹುಂಡಿಗೆ ಭಕ್ತನೋರ್ವ ತನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವಂತೆ ಪರಿಪರಿಯಾಗಿ ಬರೆದು ಬೇಡಿಕೊಂಡಿರುವ ಪತ್ರ ದೊರೆತಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಪತ್ರ ದೊರೆತಿದ್ದು ತಾಯಿ ನಮ್ಮವ್ವ ರಮೇಶ್ ಮಂಜುಳಾ ಸಂಬಳವನ್ನು ರಾಜಮ್ಮನ ಕೈಗೆ ಕೊಡಲಿ, ಮದುವೆಗೆ ಯಾವುದೇ ವಿಘ್ನಗಳು ಬಾರದಂತೆ ನೀನೇ ನೋಡಿಕೋ. ಐಶ್ವರ್ಯ ಬೇಗ ದಪ್ಪ ಆಗಿ, ದೃಷ್ಟಿಯಾಗಿ ಕಾಣುವಂತೆ ಮಾಡು ಎಂಬುದಾಗಿಯೂ ಪತ್ರದಲ್ಲಿ ಬರೆಯಲಾಗಿದೆ. 

ಇದನ್ನೂ ಓದಿ: ಮೂಡಿಗೆರೆ: ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಗೆ ಶಿಕ್ಷೆ ಪ್ರಕಟ


ಉಕ್ಕಡದ ಮಾರಮ್ಮ ನನ್ನನ್ನು ಕಾಪಾಡು, ಮಂಜುಳ ಅತ್ತೆ- ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು, ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನು ಒಳ್ಳೆಯವರಾಗಿಸು, ದೇವರಾಜು ಗೆ ಕೈ ತುಂಬಾ ಸಂಬಳ ಸಿಗುವ ಹಾಗೆ ಸರ್ಕಾರಿ ಕೆಲಸ ಕೊಡಿಸು ಎಂದು ಮನಸ್ಸಿನಲ್ಲಿರುವ ಎಲ್ಲಾ ಆಸೆಗಳನ್ನು ಪತ್ರದ ಮೂಲಕ ಬರೆದುಕೊಂಡು ದೇವರಲ್ಲಿ ಪ್ರಾರ್ಥಿಸಿದ್ದಾನೆ. 

ಪ್ರತೀ ವರ್ಷವೂ ಭಕ್ತರ ಇಂತಹ ಅನೇಕ ಪತ್ರಗಳು ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಯಲ್ಲಿ ದೊರೆಯುತ್ತದೆ. ತಮ್ಮ ಮನಸ್ಸಿನ ದುಗುಡ, ಆಗಬೇಕಿರುವ ಕೆಲಸಗಳ ಕುರಿತು ದೇವರಲ್ಲಿ ಪತ್ರದ ಮೂಲಕ ಪ್ರಾರ್ಥಿಸಿದಾಗ ದೇವರು ಅದನ್ನು ಈಡೆರಿಸುತ್ತಾರೆ ಎಂಬ ನಂಬಿಕೆ ಭಕ್ತರದ್ದು.

ಕಾಣಿಕೆ ಹುಂಡಿಯಲ್ಲಿ 18.39 ಲಕ್ಷ ರೂಪಾಯಿ ಹಣ ಸಂಗ್ರಹ: 

ಕಳಸೇಶ್ವರ ದೇವಸ್ಥಾನ ಮತ್ತು ಪರಿವಾರ ದೇವತೆಗಳ ಹುಂಡಿಗಳಲ್ಲಿ ಕಳೆದ 6 ತಿಂಗಳಿನಲ್ಲಿ 18.39 ಲಕ್ಷ ರೂಪಾಯಿ ಹಣ ಸಂಗ್ರಹಣೆಯಾಗಿದೆ. 

ಕಳೆದ ಏಪ್ರಿಲ್ 1 ರಿಂದ ಈವರೆಗಿನ 6 ತಿಂಗಳಲ್ಲಿ ಈ ಹಣವು ಸಂಗ್ರಹವಾಗಿದ್ದು. ಕಳಸೇಶ್ವರ ದೇವಸ್ಥಾನ, ಗಿರಿಜಾಂಬಾ ದೇವಸ್ಥಾನ, ಆನೆಗಣಪತಿ, ಸರ್ವಾಂಗಸುಂದರಿ, ಕ್ಷೇತ್ರಪಾಲ ಸೇರಿದಂತೆ ಒಟ್ಟು 19 ಹುಂಡಿಗಳನ್ನು ತೆರೆದು ಗುರುವಾರ ಎಣಿಕೆ ಮಾಡಲಾಗಿದೆ.