ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪೆಟ್ರೋಲ್ ಸಾಗಾಣೆ ನಡೆಸುತ್ತಿದ್ದ ಟ್ಯಾಂಕರ್ ಪಂಚರ್ ಆದ ಪರಿಣಾಮ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಡ್ಡಿ ಉಂಟಾಗಿರುವ ಘಟನೆ ಶೃಂಗೇರಿ ಹೊರವಲಯದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಯಡದಾಳು ಗ್ರಾಮದ ಹುಲುಗಾರಿನಿಂದ ನೆಮ್ಮಾರು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಪೆಟ್ರೋಲ್ ಸಾಗಾಣೆ ನಡೆಸುತ್ತಿದ್ದ ಟ್ಯಾಂಕರ್ ಪಂಚರ್ ಆದ ಪರಿಣಾಮ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಡ್ಡಿಯುಂಟಾಗಿದೆ.  

ಇದನ್ನೂ ಓದಿ: ಮಲಗಿದ್ದ ಹಸುಗಳ ಮೇಲೆ ಹರಿದ ಅಪರಿಚಿತ ವಾಹನ: ಮೂರು ಹಸುಗಳ ದುರ್ಮರಣ 


ಹಾವೇರಿಯಿಂದ ಮೈಲಾರದ ಮೇಲೆ ಮಂಗಳೂರು ಕಡೆಗೆ ಈ ಟ್ಯಾಂಕರ್ ತೆರಳುತ್ತಿತ್ತು ಎನ್ನಲಾಗಿದ್ದು ಈ ಮಧ್ಯೆ ಹುಲುಗಾರಿನ ಬಳಿ ರಸ್ತೆಯ ತಿರುವಿನಲ್ಲಿ ಟಯರ್ ಪಂಚರ್ ಆದ ಪರಿಣಾಮ ವಾಹನ ಮಧ್ಯ ರಸ್ತೆಯಲ್ಲಿಯೇ ನಿಂತಿದ್ದು ಈ ಭಾಗದಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ತೀವ್ರ ಅನಾನುಕೂಲ ಎದುರಾಗಿದೆ. 

ಅಂದಾಜು 30,000 ಲೀಟರ್ ವೈಟ್ ಪೆಟ್ರೋಲ್, ಟ್ಯಾಂಕರ್ ನಲ್ಲಿದೆ ಎನ್ನಲಾಗಿದ್ದು, ಸ್ಥಳೀಯರೇ ಈ ಬೃಹತ್ ವಾಹನದ ತೆರವು ಕಾರ್ಯಾಚರಣೆ ಮಾಡುವ ಸಲುವಾಗಿ ಜೆಸಿಬಿ ತರಿಸಿದರೂ ಕೂಡ ವಾಹನವನ್ನು ಬದಿಗೆ ಸರಿಸಲು ಸಾಧ್ಯವಾಗಿಲ್ಲ. ಪರ್ಯಾಯವಾಗಿ ವಾಹನಗಳ ಸಂಚಾರಕ್ಕೆ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು ಮಳೆ ಬಂದಲ್ಲಿ ಆ ರಸ್ತೆಯಲ್ಲೂ ವಾಹನ ಸಂಚಾರಕ್ಕೆ ಅನಾನುಕೂಲ ಎದುರಾಗಲಿದೆ. 

ಸಂಬಂಧಿಸಿದ ಅಧಿಕಾರಿಗಳು ಈ ಕುರಿತಾಗಿ ಗಮನಹರಿಸಿ ಸ್ಥಳೀಯರಿಗೆ ಹಾಗೂ ಈ ಮಾರ್ಗದ ಮೂಲಕ ಸಂಚಾರ ಮಾಡುವ ವಾಹನ ಸವಾರರಿಗೆ ತೊಂದರೆಗಳಾಗದಂತೆ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.