ಶೃಂಗೇರಿ/ಮಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಳ್ಳಭಟ್ಟಿ ತಯಾರಿಕಾ ಅಡ್ಡೆ ಮೇಲೆ ದಾಳಿ, ಲೀಟರ್ ಗಟ್ಟಲೇ ಕಳ್ಳಭಟ್ಟಿ ವಶಕ್ಕೆ ಪಡೆದ ಪೊಲೀಸರು
ಮಂಗಳೂರಿನ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಮಹಾಕಾಳಿ ಪಡ್ಪುಕ್ರಾಸ್ ಬಳಿ ಇಂದು ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಈ ದುರಂತ ನಡೆದಿದ್ದು, ತೊಕ್ಕೊಟ್ಟು ಅಂಬಿಕಾ ರೋಡ್ ಎಂಬಲ್ಲಿರುವ ವೈನ್ ಅಂಡ್ ಡೈನ್ ಬಾರ್ ಮ್ಯಾನೇಜರ್ ಆಗಿ ಕೆಲಸಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಮಂಜಿನಕಟ್ಟೆ ನಿವಾಸಿ ಪ್ರತಾಪ್ ಶೆಟ್ಟಿ ಅಪಘಾತದಲ್ಲಿ ಮೃತಪಟ್ಟ ಯುವಕ. ಇವರ ಚಿಕ್ಕಮ್ಮನ ಮಗ ವೈನ್ ಅಂಡ್ ಡೈನ್ ಬಾರ್ ನ ಕೌಂಟರ್ ಬಾಯ್ ಆಗಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ನಿವಾಸಿ ಅಭಿ ಶೆಟ್ಟಿ (22) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಾಪ್ ಮತ್ತು ಅಭಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಫರಂಗಿಪೇಟೆಯಲ್ಲಿರುವ ಪ್ರತಾಪ್ ಅವರ ಅಣ್ಣನ ಕೊಠಡಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ವೇಗದಲ್ಲಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು 50 ಮೀಟರ್ ನಷ್ಟು ದೂರ ಎಸೆಯಲ್ಪಟ್ಟಿದ್ದು ಸವಾರ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಆಟದಲ್ಲಿ ಮೇಗೂರಿನ ತಂಡವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದ ಕೀರ್ತಿ ಮೃತ ಪ್ರತಾಪ್ ಶೆಟ್ಟಿ ಯದಾಗಿತ್ತು, ಅಪಘಾತದಲ್ಲಿ ಮೃತನನ್ನು ಕಳೆದುಕೊಂಡಿರುವ ಪೋಷಕರು ಹಾಗೂ ಅಪಾರ ಸ್ನೇಹಿತರು ಮೃತನ ಸಾವಿನ ಕುರಿತು ಅತೀವವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಘಟನಾ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಅನುವುಮಾಡಿದ್ದಾರೆ.





0 Comments