ಕಳಸ: (ನ್ಯೂಸ್ ಮಲ್ನಾಡ್ ವರದಿ) ಮೋರಿ ಕುಸಿತಗೊಂಡು ರಸ್ತೆ ಸಂಪರ್ಕಕ್ಕೆ ಅತೀವವಾದ ಸಮಸ್ಯೆಯಾಗಿದ್ದು, ಎರಡು ವರ್ಷಗಳಿಂದ ಈ ಕುರಿತಾಗಿ ಮನವಿ ಮಾಡಿದರೂ ಕೂಡ ಶಾಸಕರಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲಿ ಯಾವುದೇ ರೀತಿಯ ಪರಿಹಾರವನ್ನು ಒದಗಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. 

ಇದನ್ನೂ ಓದಿ: ಶೃಂಗೇರಿ: ಒಂದೇ ಗ್ರಾಮದ ಮನೆಗಳಿಗೆ ನಾಲ್ಕನೇ ಬಾರಿ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸ್ಥಳೀಯರಲ್ಲಿ ತೀವ್ರ ಆತಂಕ 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯ ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಗೋಡು ಕಲ್ಲುಕೋರೆ ರಸ್ತೆಯ ಕಗ್ಗನಹಳ್ಳದಿಂದ ಅಳಗೋಡು ಸಂಪರ್ಕಿಸುವ ಮೋರಿ ಕುಸಿದಿದ್ದು, ಈ ಮಾರ್ಗದಲ್ಲಿ ಸಂಚಾರಕ್ಕೆ ತೀವ್ರ ತರಹದ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಸಮಸ್ಯೆಯ ಕುರಿತು ವ್ಯಕ್ತಪಡಿಸಿದ್ದಾರೆ. 

ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತೀವ್ರಮಟ್ಟದ ನೀರು ಹರಿದು ಮೋರಿಯ ಮೇಲ್ಭಾಗದ ಮಣ್ಣು ಕೊಚ್ಚಿ ಹೋಗುವಂತೆ ಮಾಡಿದೆ, ಗ್ರಾಮ ಪಂಚಾಯತ್ ವತಿಯಿಂದ ಈ ಹಿಂದೆಯೂ ಮಣ್ಣು ಹಾಕಿಸಲಾಗಿತ್ತು, ಮಳೆ ಸಂಪೂರ್ಣವಾಗಿ ಕಡಿಮೆಯಾದ ನಂತರ ಗ್ರಾಮಸ್ಥರ ಅನುಕೂಲತೆಗಾಗಿ ಮಣ್ಣು ಹಾಕಿಸಲಾಗುವುದು - ಶರತ್, ಪಿಡಿಓ, ತೋಟದೂರು ಗ್ರಾಮ ಪಂಚಾಯತ್

ಎರಡು ವರ್ಷಗಳಿಂದ ಈ ಸಮಸ್ಯೆ ತಲೆದೋರಿದ್ದು ಸಂಬಂಧಿಸಿದ ಅಧಿಕಾರಿಗಳ ಹಾಗೂ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ. 

ಯಾವಾಗಲೂ ಧಾರಾಕಾರವಾಗಿ ಮಳೆ ಸುರಿಯುವುದರಿಂದ ಈ ರಸ್ತೆ ಹಾಗೂ ಮೋರಿ ಸಂಪೂರ್ಣ ಹಾಳಾಗಿದೆ, ಗ್ರಾಮ ಪಂಚಾಯತ್ ವತಿಯಿಂದ ಮೋರಿಗೆ ಮಣ್ಣು ಸುರಿದಿದ್ದಾರೆಯೇ ಹೊರತು ಬೇರಾವುದೇ ಕಾಮಗಾರಿ ಈ ವರೆಗೆ ನಡೆದಿಲ್ಲ, ಇಂತಹ ವ್ಯವಸ್ಥೆಗಳು ಸರಿಯಲ್ಲ ಶೀಘ್ರವಾಗಿ ಮೋರಿ ದುರಸ್ಥಿ ಆಗದೇಹೋದಲ್ಲಿ ಶಾಸಕರ ಮನೆಯ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ನೊಂದ ಸ್ಥಳೀಯರು ಎಚ್ಚರಿಸಿದ್ದಾರೆ.


ಶಾಲಾ ಕಾಲೇಜುಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಇದೇ ದಾರಿಯಲ್ಲಿ ಸಾಗಬೇಕಿದ್ದು ಮೋರಿ ದಾಟುವಾಗ ಏನಾದರೂ ಅಪಾಯಗಳು ಸಂಭವಿಸಿದಲ್ಲಿ ಯಾರನ್ನು ಕೇಳುವುದು ಎಂಬುದಾಗಿ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 

ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಈ ಗ್ರಾಮದ ಜನರಿಗೆ ಅನುಕೂಲ ಉಂಟಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.