ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಿವೇಶನ ರಹಿತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗ್ರಾಮ ಪಂಚಾಯತಿ ಕಚೇರಿಗೆ ಸದಸ್ಯರು ಹಾಗೂ ಗ್ರಾಮಸ್ಥರು ಬೀಗ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ:ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ; ನಗದು ಸಹಿತ ಆರೋಪಿಗಳು ವಶಕ್ಕೆ

ನಿವೇಶನ ಒದಗಿಸುವಂತೆ ಆಗ್ರಹಿಸಿದ ಚಿಕ್ಕಮಗಳೂರು ತಾಲೂಕಿನ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಗ್ರಾಮ ಪಂಚಾಯತ್ ಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದರು. 

ಮೂರು ವರ್ಷಗಳಿಂದ ಈ ಗ್ರಾಮದ ಸರ್ವೇ ನಂಬರ್ 167 ರಲ್ಲಿ ಜನರು ಟೆಂಟ್ ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಹೋರಾಟ ಸಹ ನಡೆಸುತ್ತಿದ್ದಾರೆ ಆದರೆ ಆಶ್ರಯ ಒದಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು. 


ಈ ವೇಳೆ ಮಾಜಿ ಸಚಿವ ನಿಂಗಯ್ಯ ಮಾತನಾಡಿ ಜಾಗವು ಕಂದಾಯ ಇಲಾಖೆಗೆ ಸೇರಿದ್ದು ರಾಮಕೃಷ್ಣ ಹೆಗಡೆ, ಎಸ್ ಬಂಗಾರಪ್ಪ ಅವರ ಅವಧಿಯಲ್ಲಿ ಖಾಲಿ ಜಾಗಗಳು ಒತ್ತುವರಿಯಾಗದಿರಲಿ ಎಂಬುದಕ್ಕಷ್ಟೆ ಅಕೇಶಿಯಾ ಮರಗಳನ್ನು ನೆಡಲು ತಿಳಿಸಿದ್ದರು. ಮರಗಳನ್ನು ಬೆಳೆಸಿದ್ದ ಕಾರಣಕ್ಕೆ ತಕರಾರು ಅರ್ಜಿ ಸಲ್ಲಿಸಿ ಆಶ್ರಯಕ್ಕೆ ಅಡ್ಡಿಯುಂಟು ಮಾಡುತ್ತಿರುವುದು ಸರಿಯಲ್ಲ ಎಂದರು.

ನಿವೇಶನ ನೀಡುವಂತೆ ಒತ್ತಾಯಿಸಿದ ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿಯ 16 ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ನಿವೇಶನಕ್ಕಾಗಿ ಆಗ್ರಹಿಸಿದರು. 

ಕಚೇರಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ಆಶ್ರಯ ಕಲ್ಪಿಸುವ ಕುರಿತಾಗಿ ಅಧಿಕಾರಿಗಳು ಕೆಲಸ ಮಾಡುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕಾಗಮಿಸಿದ ಉಪತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿ ಆಗ್ರಹವನ್ನು ತಿಳಿಸಿದರು. 

ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು, ಹಾಗೂ ವಿವಿಧ ಅಧಿಕಾರಿಗಳು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಇದ್ದರು.