ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಸಾಲದೊಂದಿಗೆ ಸಬ್ಸಿಡಿಕೊಡಿಸುವ ನೆಪದಲ್ಲಿ ಮಹಿಳೆಯೋರ್ವಳು ಅನೇಕರಿಗೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಮೂರು ಲಕ್ಷ ರೂಪಾಯಿ ಸಬ್ಸಿಡಿ ಲೋನ್ ಮಾಡಿಸಿ ಕೊಡುತ್ತೇವೆ ಅಂತ ನೂರಾರು ಜನರಿಂದ ತಲಾ ಸಾವಿರ ರೂಪಾಯಿ ಹಣಪಡೆದು ಅಮಾಯಕ ಜನರಿಗೆ ದೋಖಾ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. 

ಕುಶಾಲನಗರ ತಾಲೂಕಿನ ಮಾದಾಪುರ, ಗುಮ್ಮನಕೊಲ್ಲಿ, ಏಳನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನೂರಾರು ಜನ ಅಮಾಯಕ ಸಾರ್ವಜನಿಕರಿಗೆ ವಂಚನೆ ಮಾಡಲಾಗಿದೆ. 

ಇದನ್ನೂ ಓದಿ: ಫಸಲಿಗೆ ವ್ಯಾಪಿಸಿದ ರೋಗ; 5 ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ ರೈತ

ಕಷ್ಟದಲ್ಲಿರುವ, ಹಣದ ಅವಶ್ಯಕತೆಯಿರುವ ಎಷ್ಟೋ ಕುಟುಂಬಗಳು ಸಾಲ ಸಿಕ್ಕರೆ ಸಾಕು ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಅನೇಕರು ಯೋಚಿಸುತ್ತಿರುತ್ತಾರೆ. ಅಂತಹವರನ್ನು ಗುರುತಿಸಿಕೊಂಡು ಅವರಿಗೆ ಮೋಸ ಮಾಡುವ ಜಾಲ ಪತ್ತೆಯಾಗಿದೆ. 


ಮಹಿಳೆಯರು ನಯವಾಗಿ ಕೇಳಿದಂತೆಯೇ ಪ್ಯಾನ್‍ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಹಣದ ಅವಶ್ಯಕತೆಯಿದ್ದವರು ನೀಡಿದ್ದು ಇದನ್ನು ಬಳಸಿಕೊಂಡು ಒಬ್ಬೊಬ್ಬರಿಂದ ಒಂದು ಸಾವಿರ ರೂಪಾಯಿ ಪಡೆದಿದ್ದಾರೆ. 

ಮಹಿಳೆ ಕುಸುಮಾ ಎಂಬಾಕೆ ತಾನು ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿದ್ದೇನೆ ಎಂದು ಜನರನ್ನು ನಂಬಿಸಿ, ದಾಖಲೆ ಪಡೆದುಕೊಂಡ ಮಹಿಳೆ ಕುಸುಮಾವತಿ ಇನ್ನೇನು ಲೋನ್ ಸ್ಯಾಂಕ್ಷನ್ ಆಗಿಬಿಡುತ್ತದೆ ಎಂದು ನಂಬಿಸಿ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು ಅಂತ ಪ್ರತಿಯೊಬ್ಬರಿಂದ ಒಂದು ಸಾವಿರ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 

ಕುಶಾಲನಗರ ಭಾಗದಲ್ಲಿ ನೂರಾರು ಜನರಿಂದ ಸಾವಿರ ರೂಪಾಯಿ ಪಡೆದುಕೊಂಡಿದ್ದರೆ, ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಲಾ ಐದು ಸಾವಿರ ಪಡೆದುಕೊಂಡಿದ್ದಾರೆ.

ಮಹಿಳೆ ಕುಸುಮಾವತಿ ಒಂದು ವಾರವಾದರೂ ತಿರುಗಿ ನೋಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾದಪಟ್ಟಣದ ಕೆಲವರು ಆಕೆಯ ವೈಯಕ್ತಿಕ ಹಿನ್ನಲೆಯನ್ನು ಪರಿಶೀಲಿಸಿದಾಗಲೇ ಆಕೆ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ಜನರಿಗೆ ಗೊತ್ತಾಗಿದೆ. ಬಳಿಕ ಲೋನ್‍ಗಾಗಿ ಸಾವಿರ ರೂಪಾಯಿ ಕೊಟ್ಟಿದ್ದ ಮಾದಪಟ್ಟಣದ ಮಹಿಳೆ ಸಾವಿತ್ರಿ, ಕುಸುಮಾವತಿಗೆ ಕರೆ ಮಾಡಿ ಇನ್ನೂ 25 ಜನರು ಲೋನ್ ಮಾಡಿಸಿಕೊಳ್ಳುವುದಕ್ಕೆ ಸಿದ್ಧವಿದ್ದಾರೆ ಬನ್ನಿ ಎಂದು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿ ಆಕೆಯನ್ನು ಲಾಕ್ ಮಾಡಿ ತರಾಟೆಗೆ ತೆಗೆದುಕೊಂಡಾಗ ಆಕೆಯ ಮೋಸದ ಜಾಲ ಬಯಲಾಗಿದೆ.

ಈಕೆಗೆ ಮಂಗಳೂರಿನಲ್ಲಿ ಕೆಲವರು ಪರಿಚಯವಾಗಿ ಈ ಕೆಲಸ ಮಾಡುವಂತೆ ಪುಸಲಾಯಿಸಿದ್ದರು ಎನ್ನುವುದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಸದ್ಯ ಕುಶಾಲನಗರ ಪೊಲೀಸರು ಕುಸುಮಾವತಿಯ ಹಿಂದೆ ಇರುವ ಗ್ಯಾಂಗ್ ಯಾವುದು ಅಂತ ಬಲೆ ಬೀಸಿ ತನಿಖೆ ಶುರು ಮಾಡಿದೆ.

ಮಹಿಳೆಯನ್ನು ವಶಕ್ಕೆ ಪಡೆದು ಜಾಲದ ಕುರಿತು ಪೊಲೀಸರು ಬಲೆ ಬೀಸಿದ್ದು ಇಂತಹವರ ಮೇಲೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.