ಚಿಕ್ಕಮಗಳೂರು:(ನ್ಯೂಸ್ ಮಲ್ನಾಡ್ ವರದಿ) ಅಂಬೇಡ್ಕರ್ ಭಾವಚಿತ್ರ ಹಾಗೂ ಸಕಲೇಶಪುರದ ದಲಿತ ಸಂಘಟನೆಗಳ ಪ್ರತಿಭಟನೆಯ ಫೋಟೋಗಳನ್ನು ಬಳಸಿ ಅಶ್ಲೀಲ ಹಾಡಿನ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಗೋಸಾಗಣೆ ಮಾಡುತ್ತಿದ್ದ ದಲಿತ ವ್ಯಕ್ತಿಯನ್ನು ಅಡ್ಡ ಹಾಕಿದ್ದ ಬಜರಂಗದಳದ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದರು. ಈ ಘಟನೆಯನ್ನು ಖಂಡಿಸಿ ಸಕಲೇಶಪುರದಲ್ಲಿ ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಕೆಲವು ಫೋಟೋಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಬಳಸಿದ ಹಿನ್ನೆಲೆಯಲ್ಲಿ ಅಶ್ಲೀಲ ಹಾಡಿನ ವಿಡಿಯೋ ಸೃಷ್ಟಿಸಿ ಅದನ್ನು ಸಿಕೆಎಂ ಪವರ್ ಆಫ್ ಹಿಂದೂ ಎಂಬ ಇನ್‍ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ದಲಿತಪರ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಭಾವಚಿತ್ರ ಹಾಗೂ ದಲಿತ ಹೋರಾಟಗಾರರನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಎಸ್ಪಿ ಉಮಾಪ್ರಶಾಂತ್ ಅವರಿಗೆ ದೂರು ನೀಡಿದ್ದರು ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಬಂಧಿಸಲಾಗಿರುವ ಆರೋಪಿಯನ್ನು ಬೆಂಗಳೂರು ಮೂಲದ ರಂಜಿತ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

%20-%20Copy.jpeg)



0 Comments